

ಬೆಂಗಳೂರು: ಶಿವರಾಜಕುಮಾರ್ ಅಭಿನಯದ 'ವೇದ' ಬಿಡುಗಡೆಯಾದ ಮೇಲೆ ಸುಮ್ಮನೆ ಕೂತಿಲ್ಲ. ತಮ್ಮ ತಂಡವನ್ನು ಕಟ್ಟಿಕೊಂಡು ಊರೂರು ಸುತ್ತಿ ಚಿತ್ರದ ಪ್ರಚಾರ ಮಾಡುತ್ತಿದ್ದಾರೆ. ಚಿತ್ರವನ್ನು ಆದಷ್ಟೂ ಹೆಚ್ಚು ಜನರಿಗೆ ತಲುಪಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ.
ಈ ಮಧ್ಯೆ, ಅವರು ಸದ್ದಿಲ್ಲದೆ ಇನ್ನೊಂದು ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಈ ಹಿಂದೆ ಅವರ ಹಲವು ಚಿತ್ರಗಳಿಗೆ ಕಾರ್ಯಕಾರಿ ನಿರ್ಮಾಪಕರಾಗಿ ಶಿವಾರ್ಜುನ್, ಈಗಾಗಲೇ ಚಿರು ಸರ್ಜಾ ಅಭಿನಯದ 'ಶಿವಾರ್ಜುನ' ಚಿತ್ರದ ಮೂಲಕ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಈಗ ಅವರ ನಿರ್ಮಾಣದ ಹೊಸ ಚಿತ್ರದಲ್ಲಿ ಶಿವರಾಜಕುಮಾರ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ನಿಶ್ಚಿತ ಕಂಬೈನ್ಸ್ ಲಾಂಛನದಲ್ಲಿ ಶಿವಾರ್ಜುನ್ ಪತ್ನಿ ಮಂಜುಳಾ ನಿರ್ಮಿಸುತ್ತಿರುವ ಈ ಚಿತ್ರವನ್ನು ತೇಜಸ್ವಿ ಕೆ. ನಾಗ್ ನಿರ್ದೇಶನ ಮಾಡುತ್ತಿದ್ದಾರೆ. ತೇಜಸ್ವಿ ಈ ಹಿಂದೆ ಸೃಜನ್ ಲೋಕೇಶ್ ಅಭಿನಯದ 'ಎಲ್ಲಿದೆ ಇಲ್ಲಿ ತನಕ' ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ತೇಜಸ್ ಮಾಡಿಕೊಂಡಿರುವ ಕಥೆಯನ್ನು ಕೇಳಿ, ಶಿವಣ್ಣ ಒಪ್ಪಿಕೊಂಡಿದ್ದಾರೆ. ಇದವರೆಗೂ ಮಾಡಿರದ ಒಂದು ವಿಭಿನ್ನ ಪಾತ್ರದಲ್ಲಿ ಅವರು ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಈ ಚಿತ್ರ ಇದೇ ವರ್ಷ ಪ್ರಾರಂಭವಾಗಲಿದ್ದು, ಶೀರ್ಷಿಕೆ ಮತ್ತು ಇನ್ನಿತರ ವಿಷಯಗಳು ಮುಂದಿನ ದಿನಗಳಲ್ಲಿ ಬಹಿರಂಗಗೊಳ್ಳಲಿದೆಯಂತೆ,
ಅಂದಹಾಗೆ, ಶಿವಣ್ಣ ಅಭಿನಯದ 'ಕರಟಕ ದಮನಕ' ಮತ್ತು 'ಘೋಸ್ಟ್' ಚಿತ್ರಗಳು ಅರ್ಧ ಮುಗಿದಿದ್ದು, ಈ ಚಿತ್ರಗಳು ಮುಗಿಯುತ್ತಿದ್ದಂತೆಯೇ '45' ಮತ್ತು 'ಅಶ್ವತ್ಥಾಮ' ಚಿತ್ರಗಳು ಶುರುವಾಗಲಿದೆಯಂತೆ. ಆ ಚಿತ್ರಗಳು ಮುಗಿದ ಮೇಲೆ, ಶಿವಾರ್ಜುನ್ ನಿರ್ಮಾಣದ ಚಿತ್ರ ಪ್ರಾರಂಭವಾಗುವ ಸಾಧ್ಯತೆ ಇದೆ.