ನಾನು ಸಿನಿಮಾ ನೋಡೋದನ್ನು ತಡೆಯೋಕೆ ನೀವ್ಯಾರು? ಆಶಾ ಪರೇಖ್​ ಪ್ರಶ್ನೆ

Pathaan - Asha Parekh
Published on

ಮುಂಬೈ: ಶಾರುಖ್​ ಖಾನ್​ ಅಭಿನಯದ 'ಪಠಾಣ್​' ಚಿತ್ರದ 'ಬೇಷರಮ್​ ರಂಗ್​' ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ತೊಟ್ಟಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಈ ಕುರಿತು ಹಿರಿಯ ನಟಿ ಮತ್ತು ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿ ವಿಜೇತ ನಟಿ ಆಶಾ ಪರೇಖ್​ ಸಹ ಬೇಸರ ವ್ಯಕ್ತಪಡಿಸಿದ್ದರು. ಇದೇ ರೀತಿ ಸಮಸ್ಯೆ ಮುಂದುವರೆದರೆ ಮುಂದುವರೆದರೆ ಚಿತ್ರರಂಗ ಅಂತ್ಯವಾಗುತ್ತದೆ ಎಂದು ಹೇಳಿದ್ದರು.

ಈಗ ಅವರು ಈ ಎಲ್ಲ ವಿವಾದದ ಬಗ್ಗೆ ಇನ್ನಷ್ಟು ಮಾತನಾಡಿದ್ದಾರೆ. 'ಬೇಷರಮ್​ ರಂಗ್​' ಹಾಡಿನಿಂದ ಇಷ್ಟೆಲ್ಲ ಸಮಸ್ಯೆ ಇದ್ದರೆ ಬೇಕಾದರೆ, ಆ ಹಾಡನ್ನು ಕಿತ್ತು ಹಾಕುವುದಕ್ಕೆ ಹೇಳಿ. ಅದು ಬಿಟ್ಟು ಸುಮ್ಮನೆ ಕಾಟ ಕೊಡಬೇಡಿ ಎಂದು ಚಿತ್ರವನ್ನು ಬಾಯ್ಕಾಟ್​ ಮಾಡಿ ಎಂದು ಒತ್ತಾಯ ಮಾಡುತ್ತಿರುವವರ ಬಗ್ಗೆ ಹೇಳಿದ್ದಾರೆ.

ಒಂದು ಕಾಲದಲ್ಲಿ ಸೆನ್ಸಾರ್​ ಬೋರ್ಡ್​ನ ಮುಖ್ಯಸ್ಥೆಯಾಗಿದ್ದ ಆಶಾ ಪರೇಖ್​, 'ಮೊದಲೇ ಬಾಲಿವುಡ್​ ಸಂಕಷ್ಟದಲ್ಲಿದೆ. ನಾನು 60 ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ಆದರೆ, ಯಾವತ್ತೂ ಚಿತ್ರರಂಗ ಇಷ್ಟೊಂದು ಸಂಕಷ್ಟ ಎದುರಿಸಿದ್ದನ್ನು ನಾನು ನೋಡಿಲ್ಲ. ಕಂಗೆಟ್ಟಿರುವ ಬಾಲಿವುಡ್​ಗೆ 'ಪಠಾಣ್​' ಹೊಸ ಶಕ್ತಿ ತುಂಬಲಿದೆ ಎಂಬ ಮಾತುಗಳಿವೆ. ಹೀಗಿರುವಾಗ, ಆ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಅನುವು ಮಾಡಿಕೊಡಿ. ಈಗಾಗಲೇ ಯಶ್​ರಾಜ್​ ಫಿಲಂಸ್​ ಸಂಸ್ಥೆಯು ಸಾಕಷ್ಟು ಏಟು ತಿಂದಿದೆ. ಸಾಲುಸಾಲು ಚಿತ್ರಗಳು ಸೋತಿವೆ. ಅದಕ್ಕೆ ಇನ್ನೊಂದು ಸೋಲನ್ನು ತಡೆದುಕೊಳ್ಳುವುದಕ್ಕೆ ಶಕ್ತಿ ಇಲ್ಲ' ಎಂದು ಹೇಳಿದ್ದಾರೆ.

'ಪಠಾಣ್​' ವಿವಾದದ ಬಗ್ಗೆ ಮಾತನಾಡಿದ ಅವರು, 'ಹಾಡಿನ ಬಗ್ಗೆ ಸಮಸ್ಯೆ ಇದ್ದರೆ, ಅದನ್ನು ತೆಗೆದರಾಯಿತು. ಅದರಿಂದ ಇಡೀ ಚಿತ್ರಕ್ಕೆ ಸಮಸ್ಯೆ ಮಾಡಬಾರದು. ಚಿತ್ರವನ್ನು ಬಾಯ್ಕಾಟ್​ ಮಾಡುತ್ತೀವಿ ಎಂದು ಹೆದರಿಸಬಾರದು. ಇಷ್ಟಕ್ಕೂ ಬೇಕು, ಬೇಡ ಎಂದು ಇಡೀ ದೇಶದ ಪರವಾಗಿ ತೀರ್ಮಾನಿಸುವುದಕ್ಕೆ ಕೆಲವು ಮಂದಿಗೆ ಅಧಿಕಾರ ಕೊಟ್ಟವರು ಯಾರು? ನಿಮಗೆ ಚಿತ್ರ ನೋಡೋಕೆ ಇಷ್ಟವಿಲ್ಲದಿದ್ದರೆ ನೋಡಬೇಡಿ. ನನಗೆ ಸಿನಿಮಾ ನೋಡೋಕೆ ಇಷ್ಟವಿದೆ. ನನ್ನನ್ನು ತಡೆಯೋಕೆ ನೀವ್ಯಾರು?' ಎಂದು ಅರು ಪ್ರಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net