

ಚೆನ್ನೈ: ಅಜಿತ್ ಅಭಿನಯದ 'ತುನಿವು' ಮತ್ತು ವಿಜಯ್ ಅಭಿನಯದ 'ವಾರಿಸು' ಚಿತ್ರಗಳು ಒಂದೇ ದಿನ ಬಿಡುಗಡೆಯಾಗುತ್ತಿದ್ದು, ಕಾಲಿವುಡ್ನಲ್ಲಿ ಇದು ಮೆಗಾ ಕ್ಲಾಶ್ ಎಂದು ಬಣಿಸಲಾಗುತ್ತಿದೆ. ಅಷ್ಟೇ ಅಲ್ಲ, ಈ ಎರಡು ಚಿತ್ರಗಳಲ್ಲಿ ಯಾವ ಚಿತ್ರ ಗೆಲ್ಲುತ್ತದೆ ಮತ್ತು ವಿಜಯ್ ವರ್ಸಸ್ ಅಜಿತ್ ನಡುವೆ ಯಾರು ಸೂಪರ್ ಸ್ಟಾರ್ ಆಗಿ ಮೆರೆಯುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.
ಈ ಎರಡು ಚಿತ್ರಗಳ ಪೈಕಿ ಯಾವುದು ಗೆಲ್ಲುತ್ತದೋ ಗೊತ್ತಿಲ್ಲ. ಆದರೆ, ಈ ಎರಡೂ ಚಿತ್ರಗಳ ಟ್ರೈಲರ್ಗಳ ಪೈಕಿ 'ತುನಿವು' ಚಿತ್ರದ ಟ್ರೈಲರ್ ಹಿಟ್ ಆಗುವುದರ ಜತೆಗೆ ಅತೀ ಹೆಚ್ಚು ವೀಕ್ಷಣೆ ಕಂಡಿದೆ ಎಂದು ಹೇಳಲಾಗುತ್ತಿದೆ.
'ತುನಿವು' ಚಿತ್ರದ ಟ್ರೈಲರ್ ಬಿಡಗುಡೆಯಾದ 24 ಗಂಟೆಗಳಲ್ಲಿ 30 ಮಿಲಿಯನ್ ಹಿಟ್ ಕಂಡಿದೆಯಂತೆ. ಅಂದರೆ, ಜಗತ್ತಿನಾದ್ಯಂತ ಈ ಟ್ರೈಲರ್ನ್ನು ಮೂರು ಕೋಟಿ ಜನ ವೀಕ್ಷಿಸಿದ್ದಾರೆ. ಒಂದು ವಿಷಯ ಗಮನದಲ್ಲಿರಲಿ. ಅದೇನೆಂದರೆ, ಬರೀ ಒಂದೇ ಭಾಷೆಯಲ್ಲಿ ಚಿತ್ರದ ಟ್ರೈಲರ್ 30 ಮಿಲಿಯನ್ ವೀಕ್ಷಣೆ ಕಂಡಿದೆ. ಇದಕ್ಕೆ ಪ್ರಯತಿಯಾಗಿ 'ವಾರಿಸು' ಚಿತ್ರದ ತಮಿಳು ಮತ್ತು ತೆಲುಗು ಟ್ರೈಲರ್ಗಳೆರಡರಿಂದ ಸೇರಿ 24 ತಾಸುಗಳಲ್ಲಿ ಒಟ್ಟು 32 ಮಿಲಿಯನ್ ವೀಕ್ಷಣೆಯಾಗಿದೆ. ಇವೆರಡರನ್ನು ಹೋಲಿಸಿದರೆ, 'ತುನಿವು' ಚಿತ್ರದ ಟ್ರೈಲರ್ ಮೇಲುಗೈ ಸಾಧಿಸುತ್ತದೆ.
ವಿಜಯ್ ಮತ್ತು ಅಜಿತ್ ಅಭಿನಯದ ಚಿತ್ರಗಳು ಒಂದೇ ದಿನ ಬಿಡುಗಡೆಯಾಗುತ್ತಿರುವುದು ಇದು ಮೊದಲೇನಲ್ಲ. ಎಂಟು ವರ್ಷಗಳ ಹಿಂದೆ, ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ವಿಜಯ್ ಅಭಿನಯದ 'ಜಿಲ್ಲಾ' ಮತ್ತು ಅಜಿತ್ ಅಭಿನಯದ 'ವೀರಂ' ಚಿತ್ರಗಳು ಬಿಡುಗಡೆಯಾಗಿದ್ದವು. ಈ ಪೈಕಿ, 'ವೀರಂ' ಚಿತ್ರವು ಸೂಪರ್ ಹಿಟ್ ಆದರೆ, 'ಜಿಲ್ಲಾ' ಚಿತ್ರವು ಹೆಚ್ಚು ಸುದ್ದಿಯಾಗಲಿಲ್ಲ. ಈಗ ಎಂಟು ವರ್ಷಗಳ ನಂತರ ಮತ್ತೊಮ್ಮೆ ವಿಜಯ್ ಮತ್ತು ಅಜಿತ್ ಚಿತ್ರಗಳು ಬಿಡುಗಡೆಗೆ ಸಜ್ಜಾಗುತ್ತಿದ್ದು, ಈ ಪೈಕಿ ಯಾವ ಚಿತ್ರ ಪ್ರೇಕ್ಷಕರ ಗಮನ ಸೆಳೆಯಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.