

ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದಲ್ಲಿ ಹೆಚ್ಚೇನೂ ಚೇತರಿಕೆ ಕಂಡು ಬರುತ್ತಿಲ್ಲ. ಅವರು ಬೇಗ ಗುಣಮುಖರಾಗಲೀ ಮತ್ತು ಮೊದಲಿನಂತೆ ಹಾಡುವಂತಾಗಲೀ ಎಂದು ಜಗತ್ತಿನಾದ್ಯಂತ ಎಲ್ಲರೂ ಪ್ರಾರ್ಥನೆ ಮಾಡುತ್ತಲೇ ಇದ್ದಾರೆ.
ಕನ್ನಡದಲ್ಲೂ ಹಲವು ನಟರು, ಸಂಗೀತ ನಿರ್ದೇಶಕರು ಮತ್ತು ಗಾಯಕ-ಗಾಯಕಿಯರು, ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಬೇಗ ಗುಣಮುಖರಾಗಲೀ ಎಂದು ಹಾರೈಸುತ್ತಿದ್ದಾರೆ. ಈಗ ಶಿವರಾಜಕುಮಾರ್ ಸಹ ತಮ್ಮ ಮೆಚ್ಚಿನ ಗಾಯಕ ಬೇಗ ಹುಷಾರಾಗಿ ಮತ್ತೆ ತಮ್ಮ ಮುಂದಿನ ಚಿತ್ರಕ್ಕೆ ಹಾಡಲಿ ಎಂದು ಹಾರೈಸಿದ್ದಾರೆ.
ಶಿವರಾಜಕುಮಾರ್ ಮತ್ತು ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೂ ಅವಿನಾಭಾವ ಸಂಬಂಧ. ಶಿವರಾಜಕುಮಾರ್ ಅವರ ಮೊದಲ ಚಿತ್ರ 'ಆನಂದ್'ನಿಂದ ಇಲ್ಲಿಯವರೆಗೂ, ಬಾಲಸುಬ್ರಹ್ಮಣ್ಯಂ ಬಹುತೇಕ ಚಿತ್ರಗಳಿಗೆ ಹಾಡಿದ್ದಾರೆ. ಶಿವರಾಜಕುಮಾರ್ ಅವರೇ ಹಾಡುತ್ತಿದ್ದಾರೆ ಎಂಬ ಭಾವನೆ ಬರವಷ್ಟು ಪರ್ಫೆಕ್ಟ್ ಆಗಿ ಬಾಲಸುಬ್ರಹ್ಮಣ್ಯಂ ಅವರು ಹಾಡುತ್ತಿದ್ದರು.
ಈ ಕುರಿತು ಟ್ವೀಟ್ ಮಾಡಿರುವ ಶಿವಣ್ಣ, 'ನನ್ನ ಮೊದಲ ಚಿತ್ರದಿಂದ ಪ್ರಾರಂಭಿಸಿ, ಹಲವು ಚಿತ್ರಗಳಿಗೆ ಹಾಡಿದ್ದೀರಿ. ಅಷ್ಟೇ ಅಲ್ಲ, ನಾನು ನಿಮ್ಮ ದೊಡ್ಡ ಅಭಿಮಾನಿ. ಆದಷ್ಟು ಬೇಗ ಹುಷಾರಾಗಿ ಬನ್ನಿ ಸಾರ್. ನನಗೆ ಗೊತ್ತು, ನೀವು ಗುಣಮುಖರಾಗಿ ಬಂದು ಎಲ್ಲರ ಚಿತ್ರಗಳಿಗೆ ಹಾಡುತ್ತೀರಿ ಎಂಬ ನಂಬಿಕೆ ಇದೆ. ನನ್ನ ಮುಂದಿನ ಚಿತ್ರಕ್ಕೂ ನೀವು ಹಾಡುತ್ತೀರಿ ಎಂದು ಕಾಯುತ್ತಿದ್ದೇನೆ' ಎಂದು ಬರೆದುಕೊಂಡಿದ್ದಾರೆ ಶಿವರಾಜಕುಮಾರ್.