ಪೃಥ್ವಿರಾಜ್​ ಸುಕುಮಾರನ್​ ಜತೆ ಶಿವಣ್ಣ? ಮುಂದಿನ ಚಿತ್ರಗಳ ಬಗ್ಗೆ ನಟನ ಸ್ಪಷ್ಟನೆ.

new
Published on

| ಹರ್ಷವರ್ಧನ್​ ಬ್ಯಾಡನೂರು

ಶಿವರಾಜಕುಮಾರ್​, ಸದ್ಯ ಕನ್ನಡದ ಅತ್ಯಂತ ಬಿಜಿ ನಟ. ಸ್ಯಾಂಡಲ್​ವುಡ್​ನಲ್ಲಿ ಮಾತ್ರವಲ್ಲದೇ ಪರಭಾಷೆಗಳಲ್ಲೂ ಮಿಂಚುತ್ತಿದ್ದಾರೆ. "ಜೈಲರ್​', "ಕ್ಯಾಪ್ಟನ್​ ಮಿಲ್ಲರ್​' ಜತೆ "ಘೋಸ್ಟ್​', "ಕರಟಕ ದಮನಕ', "45', "ಬೈರತಿ ರಣಗಲ್​'… ಹೀಗೆ ಅವರ ಸಿನಿಮಾಗಳ ಲಿಸ್ಟ್​ ಸಾಗುತ್ತದೆ. ಹಾಗಾದರೆ ಆ ಸಿನಿಮಾಗಳು ಈಗ ಯಾವ ಹಂತದಲ್ಲಿವೆ? ಪಾತ್ರವೇನು? ಅಂತ ಖುದ್ದು ಶಿವಣ್ಣ ಮಾತನಾಡಿದ್ದಾರೆ.

"ಜೈಲರ್​', "ಕ್ಯಾಪ್ಟನ್​ ಮಿಲ್ಲರ್​'ನಲ್ಲಿ ಕ್ಯಾಮಿಯೋ
"ಜೈಲರ್​' ಚಿತ್ರಕ್ಕೆ ಆಯ್ಕೆಯಾದ ಬಗ್ಗೆ ಹೇಳಿಕೊಳ್ಳುವ ಶಿವಣ್ಣ, "ಸಿನಿಮಾ ಒಪ್ಪಿಕೊಳ್ಳಲು ರಜಿನಿ ಸರ್​ ಮತ್ತು ನೆಲ್ಸನ್​ ಇಬ್ಬರೂ ಕಾರಣ. "ಬೈರಾಗಿ' ಶೂಟಿಂಗ್​ ಸಮಯದಲ್ಲಿ ನೆಲ್ಸನ್​ ಬಂದಿದ್ದರು. ನೋಡಿ ಖುಷಿಪಟ್ಟಿದ್ದರು. ನಿಮ್ಮ ಜತೆ ಕೆಲಸ ಮಾಡಬೇಕು ಅಂತ ಆಗಲೇ ಹೇಳಿದ್ದರು. ನೀವು ಜೈಲರ್​ ಸಿನಿಮಾದಲ್ಲಿ ನಟಿಸಲೇಬೇಕು ಅಂದರು. ರಜಿನಿ ಸರ್​ ಬಳಿ ಹೇಳಿದಾಗ ಅವರೂ ಖುಷಿಪಟ್ಟರಂತೆ. ಅವರ ಜತೆ ತೆರೆ ಹಂಚಿಕೊಳ್ಳುತ್ತಿರುವ ಖುಷಿಯಿದೆ. ನಾನೇ ತಮಿಳಿನಲ್ಲಿ ಡಬ್​ ಮಾಡಿದ್ದೇನೆ. ಸಣ್ಣ ವಯಸ್ಸಿನಿಂದ ರಜಿನಿಕಾಂತ್​ ನಮ್ಮನ್ನು ನೋಡುತ್ತಿದ್ದಾರೆ. ಅವರನ್ನು ಅಂಕಲ್​ ಎನ್ನುತ್ತೇವೆ. ನಮ್ಮ ಕುಟುಂಬದ ಜತೆ ಉತ್ತಮ ಸಂಬಂಧವಿದೆ. ಚಿಕ್ಕ ಪಾತ್ರವಾದರೂ 10, 11 ನಿಮಿಷ ಬರುತ್ತೇನೆ. ಆದರೆ, ತುಂಬ ಚೆನ್ನಾಗಿ ತೋರಿಸಿದ್ದಾರೆ. ಮಂಗಳೂರು, ಚೆನ್ನೆ$ನಲ್ಲಿ ಚಿತ್ರೀಕರಣ ಮಾಡಿದ್ದಾರೆ' ಎನ್ನುತ್ತಾರೆ. ಇನ್ನು ಧನುಷ್​ ನಾಯಕನಾಗಿರುವ "ಕ್ಯಾಪ್ಟನ್​ ಮಿಲ್ಲರ್​' ಚಿತ್ರೀಕರಣ ಪೂರ್ಣಗೊಂಡಿದ್ದು, ಅದರಲ್ಲಿ ಧನುಷ್​ ಅಣ್ಣನ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆ.

ಈ ವರ್ಷ "ಘೋಸ್ಟ್​', "ಕರಕಟ ದಮನಕ'
ಕಳೆದ ವರ್ಷ "ವೇದ' ಚಿತ್ರದ ಶಿವಣ್ಣ ಮತ್ತೆ ನಾಯಕನಾಗಿ ಕಾಣಿಸಿಕೊಂಡಿಲ್ಲ. ಆದರೆ, ಈ ವರ್ಷ ಅವರು ನಾಯಕನಾಗಿರುವ "ಘೋಸ್ಟ್​' ಮತ್ತು "ಕರಟಕ ದಮನಕ' ರಿಲೀಸ್​ ಆಗಲಿವೆ. ""ಘೋಸ್ಟ್​' ಚಿತ್ರೀಕರಣ ಪೂರ್ಣಗೊಂಡಿದೆ. "ಕರಟಕ ದಮನಕ' ಕೂಡ ಅಂತಿಮ ಹಂತದಲ್ಲಿದೆ. "ಬೈರತಿ ರಣಗಲ್​' ಮತ್ತು "45' ಎರಡರ ಚಿತ್ರೀಕರಣ ನಡೆಯುತ್ತಿದೆ. ಆ ನಂತರ "ಇನ್ಸ್​ಪೆಕ್ಟರ್​ ವಿಕ್ರಮ್​ ರಿಟರ್ನ್ಸ್​' ಪ್ರಾರಂಭ' ಎಂದು ಮಾಹಿತಿ ನೀಡುತ್ತಾರೆ ಶಿವಣ್ಣ.

ಪರಭಾಷೆಗಳಿಂದ ಹೆಚ್ಚಿದ ಆಫರ್ಸ್​
ಪರಭಾಷೆಗಳಿಂದಲೂ ಶಿವಣ್ಣಗೆ ಹೆಚ್ಚು ಅವಕಾಶಗಳು ಬರುತ್ತಿವೆಯಂತೆ. ಆದರೆ, ಕನ್ನಡದಲ್ಲೇ ಬಿಜಿಯಾಗಿರುವ ಕಾರಣ ಬೇರೆ ಭಾಷೆಗಳಲ್ಲಿ ಒಪ್ಪಿಕೊಳ್ಳುತ್ತಿಲ್ಲ ಎನ್ನುತ್ತಾರೆ. ಶಿವಣ್ಣ, "ಪೃಥ್ವಿರಾಜ್​ ಸುಕುಮಾರನ್​ ಜತೆ ಮಲಯಾಳಂ ಸಿನಿಮಾ ಆರ್​ ಇದೆ. ಸದ್ಯಕ್ಕಿನ್ನೂ ಮಾತುಕತೆ ನಡೆಯುತ್ತಿದೆ. ಅದರ ಜತೆ ಒಂದೆರಡು ಹೈದರಾಬಾದ್​ ತಂಡಗಳ ಜತೆ ಚರ್ಚೆ ನಡೀತಿದೆ. ಚಿತ್ರರಂಗಕ್ಕೆ ಬಂದು 37 ವರ್ಷಗಳಾಗಿವೆ. ಒಂದು ಸುತ್ತು ಹಾಕಿಕೊಂಡು ಬರೋಣ ಅಂತಷ್ಟೇ' ಎಂದು ನಗುತ್ತಾರೆ.

ಇನ್ನೆರಡು ಕಥೆಗಳು ಅಂತಿಮ
ಈ ಸಿನಿಮಾಗಳ ಜತೆ ಶಿವಣ್ಣ ಇನ್ನೂ ಎರಡು ಕಥೆಗಳನ್ನು ಓಕೆ ಮಾಡಿದ್ದಾರಂತೆ. ಜತೆಗೆ ನಿರ್ಮಾಪಕ ಕೆ.ಪಿ. ಶ್ರೀಕಾಂತ್​ ಜತೆಗೆ ಒಂದು ಚಿತ್ರದ ಮಾತುಕತೆ ನಡೆಯುತ್ತಿದೆಯಂತೆ. "ಇನ್ನುಮುಂದೆ ವರ್ಷಕ್ಕೆ ಎರಡು, ಮೂರು ಸಿನಿಮಾ ನಿರ್ಮಿಸಲಿದ್ದೇವೆ. ಪುತ್ರಿ ನಿವೇದಿತಾ ಸದ್ಯ ಫೈರ್​ಫ್ಲೈ ಸಿನಿಮಾ ನಿರ್ಮಿಸುತ್ತಿದ್ದಾರೆ. ಅರ್ಜುನ್​ ಜನ್ಯ "ಈಗ್ಲೂ' ಎಂಬ ಕಥೆ ಹೇಳಿದ್ದು, ಅದನ್ನು ನಾವು ನಿರ್ಮಿಸಲಿದ್ದೇವೆ. ಮುಂದೆ ವೆಬ್​ಸರಣಿಗಳನ್ನೂ ಮಾಡುವ ಆಲೋಚನೆಯಿದೆ' ಎಂದು ಹೇಳಿಕೊಳ್ಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net