

ಟಿಪ್ಪು ಸುಲ್ತಾನ್ ಜೀವನಾಧಾರಿತ ಸಿನಿಮಾ ಮಾಡುವುದಾಗಿ ಬಾಲಿವುಡ್ ನಿರ್ಮಾಪಕ ಸಂದೀಪ್ ಸಿಂಗ್ ಘೋಷಿಸಿದ್ದರು. ಕಳೆದ ಮೇ ತಿಂಗಳಲ್ಲಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಕೂಡ ಬಿಡುಗಡೆಯಾಗಿತ್ತು. ಆದರೆ ಇದೀಗ ಸಂದೀಪ್ ಸಿಂಗ್ ಆ ಸಿನಿಮಾ ನಿರ್ಮಾಣದಿಂದ ಹಿಂದೆ ಸರಿದಿದ್ದಾರೆ.
"ನನ್ನನ್ನು, ನನ್ನ ಕುಟುಂಬದವರು, ಗೆಳೆಯರನ್ನು ನಿಂದಿಸಬೇಡಿ, ಬೆದರಿಕೆ ಹಾಕುವುದನ್ನು ನಿಲ್ಲಿಸಿ ಎಂದು ನನ್ನ ಸಹೋದರ, ಸಹೋದರಿಯರಲ್ಲಿ ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತೇನೆ. ಉದ್ದೇಶಪೂರ್ವಕವಲ್ಲದೇ ಧಾರ್ಮಿಕ ಭಾವನೆಗಳನ್ನೂ ನೋಯಿಸಿದ್ದರೆ ಕ್ಷಮೆ ಕೇಳುತ್ತೇನೆ. ನಾನು ಎಲ್ಲರ ನಂಬಿಕೆಗಳನ್ನೂ ಗೌರವಿಸುತ್ತೇನೆ. ಭಾರತೀಯರಿಗೆ ಎಲ್ಲರೂ ಒಟ್ಟಾಗೋಣ, ಒಬ್ಬರು ಮತ್ತೊಬ್ಬರನ್ನು ಗೌರವಿಸೋಣ' ಎಂದು ಬರೆದುಕೊಂಡಿರುವ ಸಂದೀಪ್, ಟಿಪ್ಪು ಬಯೋಪಿಕ್ ಮಾಡುತ್ತಿಲ್ಲವೆಂದು ಘೋಷಿಸಿದ್ದಾರೆ.
ಈ ಹಿಂದೆ "ಅಲಿಗಢ್', "ಭೂಮಿ', "ಸರಬ್ಜಿತ್' ಸೇರಿ "ಪಿಎಂ ನರೇಂದ್ರ ಮೋದಿ' ಜೀವನಾಧಾರಿತ ಸಿನಿಮಾ ನಿರ್ಮಿಸಿದ್ದ ಸಂದೀಪ್ ಸಿಂಗ್, ಇದೀಗ ವೀರ್ ಸಾವರ್ಕರ್, ಅಟಲ್ ಬಿಹಾರಿ ವಾಜಪೇಯಿ ಹಾಗೂ ಬಾಳಾ ಠಾಕ್ರೇ ಬಯೋಪಿಕ್ಗಳ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಜತೆಗೆ ಕೆಲವು ದಿನಗಳ ಹಿಂದಷ್ಟೇ ಸಹಾರಾ ಕಂಪನಿ ಮಾಲೀಕ ಸುಬ್ರತೋ ರಾಯ್ ಜೀವನಾಧಾರಿತ "ಸಹಾರಾಶ್ರೀ' ಸಿನಿಮಾ ಘೋಷಿಸಿದ್ದಾರೆ.
-ಏಜೆನ್ಸೀಸ್