`ಬಿಗ್ ಬಾಸ್'ಗೆ ಸಲ್ಮಾನ್ ಪಡೆಯುತ್ತಿರುವ ಸಂಭಾವನೆ ಎಷ್ಟು?

Big-Boss-Final
Published on

ಹಿಂದಿಯ `ಬಿಗ್ ಬಾಸ್'ನ ಸೀಸನ್ 14ರ ಕೆಲಸಗಳು ಶುರುವಾಗಿವೆ. ಈಗಾಗಲೇ ಸಲ್ಮಾನ್ ಖಾನ್ ಅವರ ಪ್ರೋಮೋಗಳು ಬಿಡುಗಡೆಯಾಗಿದ್ದು, ಅಕ್ಟೋಬರ್ 4ರಿಂದ ಶುರುವಾಗುವುದಾಗಿ ಈಗಾಗಲೇ ಸುದ್ದಿಯಾಗಿದೆ. ಈ ಮಧ್ಯೆ, ಈ ಕಾರ್ಯಕ್ರಮ ನಡೆಸಿಕೊಡುವುದಕ್ಕೆ ಸಲ್ಮಾನ್ ಖಾನ್ ಎಷ್ಟು ಸಂಭಾವನೆ ಪಡೆಯಲಿದ್ದಾರೆ ಎಂಬ ಚರ್ಚೆ ಇದೀಗ ನಡೆಯುತ್ತಿದೆ.

ಸಲ್ಮಾನ್ ಸಂಭಾವನೆ ಎಷ್ಟು ಎಂಬ ಪ್ರಶ್ನೆ ಕೆಲವು ತಿಂಗಳುಗಳಿಂದ ಕೇಳಿ ಬರುತ್ತಲೇ ಇದೆ. ಅದಕ್ಕೆ ಕಾರಣ, ಈ ಬಾರಿ ಸಲ್ಮಾನ್ ಅವರು ತಮ್ಮ ಸಂಭಾವನೆಯನ್ನು ಯದ್ವಾತದ್ವಾ ಏರಿಸಿದ್ದಾರೆ ಎಂಬ ಗುಸುಗುಸು. `ಬಿಗ್ ಬಾಸ್'ನ 13ನೇ ಸೀಸನ್‍ನ ಯಶಸ್ಸು ಮತ್ತು ಜನಪ್ರಿಯತೆಯಲ್ಲಿ ಸಲ್ಮಾನ್ ಖಾನ್ ಅವರ ಪಾಲು ಬಹಳ ದೊಡ್ಡದಿದೆ. ಇಷ್ಟು ಸೀಸನ್‍ಗಳಲ್ಲಿ ಆ ಸೀಸನ್ ಸಾಕಷ್ಟು ಜನಪ್ರಿಯವಾಗಿತ್ತು. ಈ ಹಿನ್ನೆಲೆಯಲ್ಲಿ ಸಲ್ಮಾನ್ ಸಹಜವಾಗಿಯೇ ಮುಂದಿನ ಸೀಸನ್‍ಗೆ ತಮ್ಮ ಸಂಭಾವನೆ ಹೆಚ್ಚು ಮಾಡುತ್ತಾರೆ ಎಂಬ ನಿರೀಕ್ಷೆ ಇದ್ದೇ ಇತ್ತು.

ಆದರೆ, ಅದು ಎಷ್ಟರ ಮಟ್ಟಿಗೆ ಏರಿದೆ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಮೂಲಗಳ ಪ್ರಕಾರ, ಈ ಒಟ್ಟು ಸೀಸನ್‍ಗೆ ಸಲ್ಮಾನ್ ಪಡೆಯುತ್ತಿರುವ ಸಂಭಾವನೆ ಬರೋಬ್ಬರಿ 250 ಕೋಟಿ. ಈ ಕಾರ್ಯಕ್ರಮಕ್ಕಾಗಿ ಪ್ರತೀ ವಾರ ಒಂದು ದಿನ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಒಂದೇ ದಿನ ಎರಡೂ ಎಪಿಸೋಡ್‍ಗಳನ್ನು ಶೂಟ್ ಮಾಡಿಕೊಳ್ಳಲಾಗುತ್ತದೆ. ಆ ಪ್ರಕಾರ, ಸಲ್ಮಾನನ್ ಅವರ ಒಂದು ದಿನದ ಸಂಭಾವನೆ 20.50 ಕೋಟಿಯಾಗಿದ್ದು, ಒಂದು ಎಪಿಸೋಡ್‍ಗೆ 10.25 ಕೋಟಿಯಾಗುತ್ತದೆ. ಬಹುಶಃ ಒಂದು ಎಪಿಸೋಡ್‍ಗೆ 10 ಕೋಟಿ ಪಡೆಯುವ ಮತ್ತೊಬ್ಬ ಸೆಲೆಬ್ರಿಟಿ ಭಾರತೀಯ ಚಿತ್ರರಂಗದಲ್ಲಿ ಸಿಗಲಿಕ್ಕಿಲ್ಲ.

ಇಷ್ಟೊಂದು ಸಂಭಾವನೆ ಹೆಚ್ಚಾಗಲಿಲ್ಲವಾ ಎಂಬ ಪ್ರಶ್ನೆ ಸಹಜವೇ. ಆದರೆ, ಚಾನಲ್‍ನ ದೃಷ್ಟಿಯಿಂದ ನೋಡಿದರೆ, ಕಡಿಮೆ ಇರಬಹುದು. ಏಕೆಂದರೆ, ಇಷ್ಟೆಲ್ಲಾ ಸಂಭಾವನೆ ಬರೀ `ಬಿಗ್ ಬಾಸ್'ಗೆ ಮಾತ್ರ ಎಂದು ಹೇಳುವ ಹಾಗಿಲ್ಲ. ಏಕೆಂದರೆ, ಚಾನಲ್‍ನ ಪ್ರಶಸ್ತಿ ಪ್ರದಾನ ಸಮಾರಂಭಗಳು ಮತ್ತು ಇತರೆ ಕಾರ್ಯಕ್ರಮಗಳಲ್ಲಿ ಸಲ್ಮಾನ್ ಭಾಗವಹಿಸಬೇಕಾಗುತ್ತದೆ ಮತ್ತು ಅದಕ್ಕೆ ಪ್ರತ್ಯೇಕವಾಗಿ ಅವರು ಯಾವುದೇ ಸಂಭಾವನೆ ಪಡೆಯುವ ಹಾಗಿಲ್ಲ. ಹಾಗಾಗಿ ಸ್ವಲ್ಪ ಕಾಸ್ಟ್ಲಿ ಎಂದನಿಸಿದರೂ, ಸಲ್ಮಾನ್ ಹೇಳಿದ ಮೊತ್ತವನ್ನು ಕೊಟ್ಟು, ಅವರನ್ನು ಈ ಕಾರ್ಯಕ್ರಮಕ್ಕೆ ಬುಕ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net