

ನವದೆಹಲಿ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮ ಭಾರತದ ಸ್ಟಾರ್ ದಂಪತಿಗಳಲ್ಲಿ ಪ್ರಮುಖವಾದವರು. ಅಪ್ಪ-ಅಮ್ಮನಾಗುತ್ತಿರುವ ಬಗ್ಗೆ ಅವರು ಗುರುವಾರ ಘೋಷಣೆ ಮಾಡಿರುವ ಸುದ್ದಿ, ಸಾಮಾಜಿಕ ಜಾಲತಾಣದಲ್ಲಿ ಹೊಸ ದಾಖಲೆಯನ್ನೇ ಬರೆದಿದೆ!
2021ರ ಜನವರಿಯಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ವಿರೂಷ್ಕಾ ಖ್ಯಾತಿಯ ದಂಪತಿ, ಅನುಷ್ಕಾ ಬೇಬಿ ಬಂಪ್ ಪ್ರದರ್ಶಿಸುತ್ತಿರುವ ಚಿತ್ರದೊಂದಿಗೆ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು. ಈ ಪ್ರಗ್ನನ್ಸಿ ಘೋಷಣೆ ಹೊರಬಿದ್ದ 24 ಗಂಟೆಗಳಲ್ಲಿ ಇನ್‌ಸ್ಟಾಗ್ರಾಂನಲ್ಲಿ 15.3 ದಶಲಕ್ಷ ಲೈಕ್ಸ್‌ಗಳನ್ನು ಪಡೆದುಕೊಂಡಿದೆ. ಈ ಮೂಲಕ ಅತ್ಯಂತ ಹೆಚ್ಚು ಲೈಕ್ಸ್ ಪಡೆದುಕೊಂಡ ಸೆಲೆಬ್ರಿಟಿ ಇಮೇಜ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮ ದಂಪತಿಗೆ ಕ್ರಿಕೆಟ್, ಬಾಲಿವುಡ್ ವಲಯ ಮತ್ತು ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿತ್ತು. ಈ ಹಿಂದೆ ಕೆಲ ಸೆಲೆಬ್ರಿಟಿ ದಂಪತಿಗಳು ಪ್ರಕಟಿಸಿರುವ ಪ್ರಗ್ನನ್ಸಿ, ವಿವಾಹ, ನಿಶ್ಚಿತಾರ್ಥಗಳ ಸುದ್ದಿಯನ್ನು ವಿರೂಷ್ಕಾರ ಘೋಷಣೆ ಮೀರಿಸಿದೆ.
ಅಮೆರಿಕದ ಫ್ಯಾಷನ್ ಮಾಡೆಲ್ ಗಿಗಿ ಹಡಿಡ್ ಪ್ರೆಗ್ನನ್ಸಿ ಸುದ್ದಿಯನ್ನು ಪ್ರಕಟಿಸಿದಾಗ ಅವರ ಫೋಟೋ 24 ಗಂಟೆಗಳಲ್ಲಿ 8.2 ದಶಲಕ್ಷ ಲೈಕ್ಸ್‌ಗಳನ್ನು ಪಡೆದುಕೊಂಡಿದ್ದು ಹಿಂದಿನ ದಾಖಲೆಯಾಗಿತ್ತು. ಇನ್ನು ಅಮೆರಿಕದ ರೂಪದರ್ಶಿ ಹೈಲಿ ಬಾಲ್ಡ್‌ವಿನ್ ನಿಶ್ಚಿತಾರ್ಥವನ್ನು ಘೋಷಿಸಿದಾಗ 13.4 ದಶಲಕ್ಷ ಲೈಕ್ಸ್‌ಗಳನ್ನು ಪಡೆದುಕೊಂಡಿದ್ದರು. ಅಮೆರಿಕದ ಪಾಪ್ ಸಿಂಗರ್, ನಟಿ ಸೆಲೆನಾ ಗೋಮೆಜ್ ಅವರು ಫ್ಲೋರೆನ್ಸ್ಗೆ ವಿಹಾರಕ್ಕೆ ಹೋಗಿದ್ದಾಗಿನ ಚಿತ್ರ 14.2 ದಶಲಕ್ಷ ಲೈಕ್ಸ್‌ಗಳನ್ನು ಪಡೆದುಕೊಂಡಿತ್ತು. ರಾಕ್ ಎಂದೇ ಖ್ಯಾತಿ ಪಡೆದಿರುವ ಅಮೆರಿಕದ ಕುಸ್ತಿತಾರೆ ಡ್ವೇಯ್ನ ಜಾನ್ಸನ್ ವಿವಾಹದ ಚಿತ್ರ 14.6 ದಶಲಕ್ಷ ಲೈಕ್ಸ್‌ಗಳನ್ನು ಪಡೆದುಕೊಂಡಿದ್ದು ಕೂಡ ದಾಖಲೆಯಾಗಿತ್ತು.
ವಿರೂಷ್ಕಾ ಪ್ರಕಟಿಸಿರುವ ಪ್ರೆಗ್ನನ್ಸಿ ಸುದ್ದಿ ಹಿಂದಿನ ಎಲ್ಲ ದಾಖಲೆಗಳನ್ನು ಮೀರಿಸಿ ಸಾಮಾಜಿಕ ಜಾಲತಾಣದಲ್ಲಿ ಇತಿಹಾಸವನ್ನೇ ಸೃಷ್ಟಿಸಿದೆ. ಈ ಮುನ್ನ 2017ರಲ್ಲಿ ಅವರ ವಿವಾಹದ ಚಿತ್ರವೂ ಸಾಮಾಜಿಕ ಜಾಲತಾಣದಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು.