

ಸುಶಾಂತ್ ಸಿಂಗ್ ನಿಧನರಾಗಿ ಒಂದು ತಿಂಗಳಾಗಿದೆ. ಈ ಒಂದು ತಿಂಗಳಲ್ಲಿ ಸುಶಾಂತ್ ಸಾವಿಗೆ ಕಾರಣವೇನಿರಬಹುದು ಎಂದು ಮುಂಬೈ ಪೊಲೀಸ್, ಎಲ್ಲಾ ಆಂಗಲ್ಗಳಿಂದಲೂ ತನಿಖೆ ನಡೆಸುತ್ತಲೇ ಬಂದಿದ್ದಾರೆ. ಇದುವರೆಗೂ 30ಕ್ಕೂ ಹೆಚ್ಚು ಜನರ ವಿಚಾರಣೆಯಾಗಿದೆ. ಈ ಪೈಕಿ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ, ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ, ಟ್ಯಾಲೆಂಟ್ ಮ್ಯಾನೇಜರ್ ರೇಶ್ಮಾ ಶೆಟ್ಟಿ ಮುಂತಾದವರು ಸೇರಿದ್ದಾರೆ.
ಈ ಮಧ್ಯೆ, ಸಲ್ಮಾನ್ ಖಾನ್ ಅವರ ಹೆಸರು ಸಹ ಈ ಕೇಸ್ನಲ್ಲಿ ಥಳುಕು ಹಾಕಿಕೊಂಡಿದ್ದರಿಂದ, ಅವರ ವಿಚಾರಣೆಯನ್ನೂ ಮಾಡಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಈ ಸುದ್ದಿ ಸುಳ್ಳಾಗಿದೆ. ಸಲ್ಮಾನ್ ಖಾನ್ ಅವರನ್ನು ವಿಚಾರಣೆಗೆ ಒಳಪಡಿಸುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸುಶಾಂತ್ ಆತ್ಮಹತ್ಯೆಯಲ್ಲಿ ಸಲ್ಮಾನ್ ಅವರ ನೇರ ಪಾತ್ರ ಇಲ್ಲಿದಿದ್ದರೂ, ಪರೋಕ್ಷವಾಗಿ ಕಾರಣವಾಗಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಳೆದ ಒಂದು ತಿಂಗಳನಿಂದ ಸಾಕಷ್ಟು ಚರ್ಚೆಯಾಗಿದೆ. ಪ್ರಮುಖವಾಗಿ ಸುಶಾಂತ್ ಮತ್ತು ಸೂರಜ್ ಪಂಚೋಲಿ ನಡುವೆ ಒಂದು ಪಾರ್ಟಿಯಲ್ಲಿ ಕಿತ್ತಾಟವಾಗಿತ್ತಂತೆ. ಈ ವಿಷಯದಲ್ಲಿ ಸೂರಜ್ ಪರವಾಗಿ ನಿಂತ ಸಲ್ಮಾನ್, ತಮ್ಮ ಪವರ್ ಉಪಯೋಗಿಸಿ, ಸುಶಾಂತ್ಗೆ ಕೆಲಸ ಇಲ್ಲದಂತೆ ಮಾಡಿದರು ಮತ್ತು ಇದರಿಂದ ಬೇಸರಗೊಂಡು ಸುಶಾಂತ್ ಆತ್ಮಹತ್ಯೆ ಮಾಡಿಕೊಂಡರು ಎಂದು ಹೇಳಲಾಗುತ್ತಿದೆ.
ಆದರೆ, ಈ ಕುರಿತಾಗಿ ಯಾವುದೇ ಪ್ರಬಲ ಸಾಕ್ಷ್ಯಾಧಾರಗಳಿಲ್ಲ. ಇವೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿರುವ ವಿಷಯಗಳಾದ್ದರಿಂದ, ಇದನ್ನು ಗಂಭೀರವಾಗಿ ಪರಿಗಣಿಸುವುದು ಕಷ್ಟ ಎಂಬ ಕಾರಣಕ್ಕೆ, ಸಲ್ಮಾನ್ ಖಾನ್ ಅವರನ್ನು ವಿಚಾರಣೆಗೆ ಮುಂಬೈ ಪೊಲೀಸರು ಕರೆಸುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಪೊಲೀಸರು ಈ ವಿಷಯವಾಗಿ ಸಲ್ಮಾನ್ ಖಾನ್ ಅವರನ್ನು ವಿಚಾರಣೆಗೆ ಒಳಪಡಿಸದಿದ್ದರೂ, ಸಲ್ಮಾನ್ ಅವರನ್ನು ಕಳೆದ ಒಂದು ತಿಂಗಳಿನಿಂದ ನೆಟ್ಟಿಗರು ಸಾಕಷ್ಟು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಸುಶಾಂತ್ ಅವರ ಬಿಹಾರದ ಅಭಿಮಾನಿಗಳು, ಸಲ್ಮಾನ್ ಅವರ ಪ್ರತಿಕೃತಿಯನ್ನು ದಹಿಸಿ, ಅವರ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದರು.