

ಮುಂಬೈ: ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷಿತ ಚಿತ್ರ ರಾಧೇ ಇಂದು ದುಬೈ ಮುಂತಾದ ಕಡೆ ಪ್ರೀಮಿಯರ್ ಆಗುತ್ತಿದ್ದು, ನಾಳೆ ಓಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ. ಈ ಮಧ್ಯೆ, ಸಲ್ಮಾನ್ ಖಾನ್ ಅವರು ಚಿತ್ರಮಂದಿರದವರ ಕ್ಷಮೆ ಕೇಳಿದ್ದಾರೆ.
ಸಲ್ಮಾನ್, ಚಿತ್ರಮಂದಿರವರ ಕ್ಷಮೆ ಕೇಳಿದ್ದು ಯಾಕೆ? ಎಂಬ ಪ್ರಶ್ನೆ ಸಹಜ. ವಿಷಯವೇನೆಂದರೆ, ರಾಧೇ ಚಿತ್ರವು ಕಳೆದ ವರ್ಷವೇ ಬಿಡುಗಡೆಯಾಗಬೇಕಿತ್ತು. ಲಾಕ್ಡೌನ್ನಿಂದ ಅದು ಸಾಧ್ಯವಾಗಲಿಲ್ಲ. ಆ ನಂತರ, ಓಟಿಟಿಯಲ್ಲಿ ಚಿತ್ರ ಬಿಡುಗಡೆಯಾಗುತ್ತದೆ ಎಂಬ ಮಾತು ಕೇಳಿಬಂತು. ಹೀಗಿರುವಾಗ, ಚಿತ್ರಮಂದಿರ ಮಾಲೀಕರು ಸಲ್ಮಾನ್ಗೆ ಚಿತ್ರವನ್ನು ಚಿತ್ರಮಂದಿರಗಳಲ್ಲೇ ಬಿಡಗುಡೆ ಮಾಡುವಂತೆ ಮಾಡಿಕೊಂಡರು. ಸಲ್ಮಾನ್ರಂತಹ ದೊಡ್ಡ ಸ್ಟಾರ್ ನಟರೊಬ್ಬರ ಚಿತ್ರವೊಂದು ಬಿಡುಗಡೆಯಾದರೆ, ಜನ ಆಟೋಮ್ಯಾಟಿಕ್ ಆಗಿ ಚಿತ್ರಮಂದಿರದ ಕಡೆಗೆ ಬರುತ್ತಾರೆ ಎಂದು ಅರ್ಥ ಮಾಡಿಸಿದರು. ಇದಕ್ಕೆ ಒಪ್ಪಿದ ಸಲ್ಮಾನ್, ಈ ವರ್ಷದ ಮೇ 13ರಂದು ಚಿತ್ರಮಂದಿರಗಳಲ್ಲೇ ಚಿತ್ರ ಬಿಡುಗಡೆ ಮಾಡುವುದಾಗಿ ಘೋಷಿಸಿದರು.
ಅದರಂತೆ, ಮೇ 13ರಂದು ಚಿತ್ರವೇನೋ ಬಿಡುಗಡೆಯಾಗುತ್ತಿದೆ. ಆದರೆ, ಭಾರತದಲ್ಲಿ ಬಹುತೇಕ ರಾಜ್ಯಗಳಲ್ಲಿ ಲಾಕ್ಡೌನ್ ಘೋಷಣೆಯಾಗಿರುವುದರಿಂದ, ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿಲ್ಲ. ಬದಲಿಗೆ, ಓಟಿಟಿಗಳಲ್ಲಿ ಚಿತ್ರಬಿಡುಗಡೆಯಾಗುತ್ತಿದೆ. ಅಂದುಕೊಂಡಂತೆ, ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿಲ್ಲ ಎಂಬ ಕಾರಣಕ್ಕೆ ಸಲ್ಮಾನ್, ಚಿತ್ರಪ್ರದರ್ಶಕರ ಕ್ಷಮೆ ಕೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಚಿತ್ರಮಂದಿರಗಳಲ್ಲೇ ಚಿತ್ರವನ್ನು ಬಿಡಗುಡೆ ಮಾಡಬೇಕೆಂಬ ಆಸೆಯಿಂದ ಇಷ್ಟು ದಿನ ಕಾದಿದ್ದು ವ್ಯರ್ಥವಾಗಿದೆ. ಲಾಕ್ಡೌನ್ ಇರುವುದರಿಂದ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಕ್ಷಮೆ ಕೇಳುತ್ತೇನೆ. ಈ ಲಾಕ್ಡೌನ್ ಎಷ್ಟು ದಿನ ಇರುತ್ತದೆ ಎಂದು ಗೊತ್ತಿಲ್ಲವಾದ್ದರಿಂದ, ನಮಗೆ ಬೇರೆ ದಾರಿ ಕಾಣಿಸುತ್ತಿಲ್ಲ. ಹಾಗಾಗಿ, ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಅದೇ ರೀತಿ ಹೊರದೇಶಗಳಲ್ಲೂ 25 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡಬೇಕಿದೆ ಎಂದು ಹೇಳಿಕೊಂಡಿದ್ದಾರೆ.
ಹಾಗಂತ ಇದೇ ಕೊನೆಯಲ್ಲ ಎಂದಿರುವ ಅವರು, ನಮ್ಮ ಮೊದಲ ಆದ್ಯತೆ ಚಿತ್ರಮಂದಿರ. ಹಾಗಾಗಿ, ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಆಸೆ ಇನ್ನೂ ಇದೆ. ಇವೆಲ್ಲ ಮುಗಿದ ಮೇಲೆ, ಚಿತ್ರವನ್ನು ಚಿತ್ರಮಂದಿರಗಳಲ್ಲಿ ಇನ್ನೊಮ್ಮೆ ಬಿಡುಗಡೆ ಮಾಡುತ್ತೇವೆ. ಚಾನಲ್ ಮತ್ತು ಓಟಿಟಿಯಲ್ಲಿ ನೋಡದವರು, ಆಗ ನೋಡಬಹುದು ಎಂದು ಸಲ್ಮಾನ್ ಹೇಳಿದ್ದಾರೆ.