

ಮುಂಬೈ: ಅವರು ನಟ-ನಟಿಯರ ಆರೋಗ್ಯದಲ್ಲಿ ಏರುಪೇರಾಗಿದೆ, ಅವರು ಕರೊನಾದಿಂದ ನಿಧನರಾಗಿದ್ದಾರೆ ಎಂಬ ಸುದ್ದಿಗಳು ಇತ್ತೀಚೆಗೆ ಮಾಮೂಲಾಗಿಬಿಟ್ಟಿದೆ. ಆಮೇಲೆ ಆ ಕಲಾವಿದರು ತಮಗೇನೂ ಆಗಿಲ್ಲ, ಸುರಕ್ಷಿತವಾಗಿದ್ದೇವೆ ಎಂದು ಹೇಳಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಇತ್ತೀಚೆಗೆ, ಕನ್ನಡದ ಹಿರಿಯ ನಟ ದೊಡ್ಡಣ್ಣ ಅವರ ಆರೋಗ್ಯದ ಬಗ್ಗೆ ಇದೇ ರೀತಿ ಅಪಪ್ರಚಾರವಾಗಿತ್ತು. ಕೊನೆಗೆ, ದೊಡ್ಡಣ್ಣ ವೀಡಿಯೋ ಮೂಲಕ ತಾವು ಆರೋಗ್ಯಕರವಾಗಿರುವುದಾಗಿ ಸ್ಪಷ್ಟಪಡಿಸಿದ್ದರು.
ಈಗ ಅಂಥದ್ದೇ ಒಂದು ಪರಿಸ್ಥಿತಿ ಬಾಲಿವುಡ್ನ ಹಿರಿಯ ನಟ ಮುಖೇಶ್ ಖನ್ನಾ ಅವರಿಗೂ ಬಂದಿದೆ. ಮುಖೇಶ್ ಖನ್ನಾ ಅವರಿಗೆ ಕರೊನಾ ಪಾಸಿಟಿವ್ ಆಗಿದೆ, ಅದರಿಂದ ಅವರು ಮೃತಪಟ್ಟಿದ್ದಾರೆ ಎಂಬ ಸುದ್ದಿಯೊಂದು ಮಂಗಳವಾರ ಬಾಲಿವುಡ್ ಅಂಗಳದಲ್ಲಿ ಕೇಳಿಬಂದಿತ್ತು. ಅದೆಲ್ಲ ಸುಳ್ಳು, ತಾನು ಆರೋಗ್ಯವಾಗಿದ್ದೇನೆ ಎಂದು ಸ್ವತಃ ಮುಖೇಶ್ ಖನ್ನಾ ಹೇಳಿಕೊಂಡ ಮೇಲೆ ಆ ಸುದ್ದಿಗಳೆಲ್ಲ ತಣ್ಣಗಾಗಿವೆ.
ನನಗೆ ಕರೊನಾ ಪಾಸಿಟಿವ್ ಆಗಿಲ್ಲ. ಹಾಗೆಯೇ ನಾನು ಯಾವುದೇ ಕೋವಿಡ್ ಸೆಂಟರ್ಗೆ ಸಹ ದಾಖಲಾಗಿಲ್ಲ. ಆದರೂ ನಾನು ಸತ್ತಿದ್ದೇನೆ ಎಂಬ ಸುದ್ದಿ ಹರಡಿದೆ. ಹಲವರು ಫೋನ್ ಮಾಡಿ ನನ್ನ ಆರೋಗ್ಯ ವಿಚಾರಿಸುತ್ತಿದ್ದಾರೆ. ನನಗೆ ಏನೂ ಆಗಿಲ್ಲ. ನಾನು ಆರೋಗ್ಯವಾಗಿರುವುದಷ್ಟೇ ಅಲ್ಲ, ಸುರಕ್ಷಿತವಾಗಿದ್ದೇನೆ. ದಯವಿಟ್ಟು ನನ್ನ ಆರೋಗ್ಯದ ಬಗ್ಗೆ ಸುಳ್ಳುಸುದ್ದಿಗಳನ್ನು ಹಬ್ಬಿಸಬೇಡಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ದೂರದರ್ಶನದಲ್ಲಿ ಪ್ರಸಾರವಾದ ಮಹಾಭಾರತ ಧಾರಾವಾಹಿಯಲ್ಲಿ ಭೀಷ್ಮನ ಪಾತ್ರ ಮಾಡುವ ಮೂಲಕ ಮುಖೇಶ್ ಖನ್ನಾ ಜನಪ್ರಿಯರಾಗಿದ್ದರು. ಆ ನಂತರ ಅವರು ಶಕ್ತಿಮಾನ್ ಎಂಬ ಭಾರತದ ಮೊದಲ ಸೂಪರ್ ಹೀರೋ ಕುರಿತು ಧಾರಾವಾಹಿಯನ್ನು ನಿರ್ಮಿಸುವುದರ ಜತೆಗೆ, ಶಕ್ತಿಮಾನ್ ಪಾತ್ರವನ್ನು ಸಹ ಮಾಡಿದ್ದರು.