ಟಾಲಿವುಡ್ ಮಂದಿಗೆ ಪೂಜಾ ಮಾವಿನ ಹಣ್ಣು

IMG-20210512-WA0003
Published on

ಕರೊನಾದಿಂದ ಚೇತರಿಸಿಕೊಂಡಿರುವ ಪೂಜಾ ಹೆಗ್ಡೆ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ, ಅವರು ತೆಲುಗು ಚಿತ್ರರಂಗದಲ್ಲಿನ ತಮ್ಮ ಆಪ್ತರು ಮತ್ತು ಹಿತೈಷಿಗಳಿಗೆ ಗಿಫ್ಟ್ ಕಳಿಸುತ್ತಿದ್ದಾರಂತೆ.

ಆ ಗಿಫ್ಟ್ ಏನು ಗೊತ್ತಾ? ಮಾವಿನ ಹಣ್ಣು. ಇದು ಮಾವಿನ ಹಣ್ಣಿನ ಸೀಸನ್ ಬೇರೆ. ಜತೆಗೆ, ಪೂಜಾ ತಮ್ಮ ತೋಟದಲ್ಲಿ ಮಾವು ಬೆಳೆಯುತ್ತಾರೆ. ಈ ಬಾರಿ ತಾವು ಮಾತ್ರ ತಿಂದರೆ ಸಾಲದು, ಜತೆಗೆ ಆಪ್ತರು ಸಹ ತಿನ್ನಬೇಕು ಎಂದು ತೀರ್ವನಿಸಿರುವ ಪೂಜಾ, ತೆಲುಗು ಚಿತ್ರರಂಗದ ಹಲವು ಕಲಾವಿದರು ಮತ್ತು ತಂತ್ರಜ್ಞರಿಗೆ ಮಾವಿನ ಹಣ್ಣನ್ನು ಗಿಫ್ಟ್​ಪ್ಯಾಕ್ ಮಾಡಿ ಕಳುಹಿಸುತ್ತಿದ್ದಾರಂತೆ.

ಈಗಾಗಲೇ ತೆಲುಗಿನ ಜನಪ್ರಿಯ ನಿರ್ದೇಶಕ ತ್ರಿವಿಕ್ರಮ ಶ್ರೀನಿವಾಸ್​ಗೆ ಪೂಜಾ ಅವರ ತೋಟದ ಮಾವಿನ ಹಣ್ಣುಗಳು ತಲುಪಿವೆಯಂತೆ. ಪೂಜಾಗೆ ತೆಲುಗು ಚಿತ್ರರಂಗದಲ್ಲಿ ದೊಡ್ಡ ಬ್ರೇಕ್ ನೀಡಿದವರೆಂದರೆ ಅದು ತ್ರಿವಿಕ್ರಮ್ ಶ್ರೀನಿವಾಸ್. ತ್ರಿವಿಕ್ರಮ್ ನಿರ್ದೇಶನದ ‘ಅಲಾ ವೈಕುಂಠಪುರಂಲೋ’ ಚಿತ್ರದಲ್ಲಿ ನಟಿಸಿದ ಪೂಜಾ, ಆ ನಂತರ ತೆಲುಗು ಚಿತ್ರರಂಗದ ಬೇಡಿಕೆಯ ನಟಿಯಾಗುವುದರ ಜತೆಗೆ, ಹಲವು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಹಾಗಾಗಿ, ತ್ರಿವಿಕ್ರಮ್ ಶ್ರೀನಿವಾಸ್​ಗೆ ಮೊದಲು ಮಾವಿನ ಹಣ್ಣುಗಳನ್ನು ಪೂಜಾ ಕೊಟ್ಟಿದ್ದು, ಸದ್ಯದಲ್ಲೇ ತೆಲುಗು ಚಿತ್ರರಂಗದ ಇನ್ನಷ್ಟು ಕಲಾವಿದರು ಮತ್ತು ತಂತ್ರಜ್ಞರಿಗೆ ಮಾವಿನ ಹಣ್ಣುಗಳನ್ನು ಕಳುಹಿಸಲಿದ್ದಾರಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net