‘ಜೇಮ್ಸ್’ಗೆ ದಾರಿ ಮಾಡಿಕೊಟ್ಟ ರಾಜಮೌಳಿ: 'ಅದೂ ಅಲ್ಲ, ಇದೂ ಅಲ್ಲ' ಎಂದು 'ಆರ್​ಆರ್​ಆರ್'​​ ಬಿಡುಗಡೆಗೆ ಹೊಸ ದಿನಾಂಕ ನಿಗದಿ..

RRR
Published on

ಬೆಂಗಳೂರು: ಎಸ್​.ಎಸ್​.ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ಆರ್​ಆರ್​ಆರ್​ ಬಿಡುಗಡೆಗೆ ಈ ಹಿಂದೆ ಒಮ್ಮೆ ಘೋಷಿಸಿದ್ದ ದಿನಾಂಕ ಬದಲಾಗಿದ್ದು, ಆಮೇಲೆ ಹೊಸದಾಗಿ ಎರಡು ದಿನಾಂಕಗಳನ್ನು ನಿಗದಿ ಮಾಡಲಾಗಿತ್ತು. ಇದೀಗ ಅದೂ ಅಲ್ಲ, ಇದೂ ಅಲ್ಲ ಎಂದು ಆ ಎರಡೂ ದಿನಾಂಕಗಳನ್ನು ಬಿಟ್ಟು ಆರ್​ಆರ್​ಆರ್​ ಬಿಡುಗಡೆಗೆ ಮತ್ತೊಂದು ಹೊಸ ದಿನಾಂಕ ನಿಗದಿ ಮಾಡಿ ಘೋಷಿಸಲಾಗಿದೆ. ಅಷ್ಟಕ್ಕೂ ಈ ಬದಲಾವಣೆಗೆ ಕಾರಣ, ಪುನೀತ್ ರಾಜಕುಮಾರ್ ಅಭಿನಯದ 'ಜೇಮ್ಸ್​'.

ಆರ್​ಆರ್​ಆರ್​ ಚಿತ್ರವನ್ನು ಮಾರ್ಚ್ 18 ಅಥವಾ ಏಪ್ರಿಲ್ 28ರಂದು ಬಿಡುಗಡೆ ಮಾಡುವುದು ಎಂದು ಚಿತ್ರತಂಡ ಈಗಾಗಲೇ ಘೋಷಣೆ ಮಾಡಿತ್ತು. ಆದರೆ ಎರಡು ಪ್ರಮುಖ ದಿನಗಳನ್ನು ಲಾಕ್ ಮಾಡಿದ್ದ ರಾಜಮೌಳಿ ಈಗ ಆ ಎರಡು ದಿನಗಳನ್ನು ಬಿಟ್ಟು ಹೊಸ ದಿನಾಂಕವನ್ನು ಘೋಷಿಸಿದ್ದಾರೆ. ಮಾರ್ಚ್ 25ರಂದು ಆರ್​ಆರ್​ಆರ್​ ಚಿತ್ರ ಬಿಡುಗಡೆ ಆಗಲಿದೆ.

ಏಕೆಂದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಕೊನೆಯ ಸಿನಿಮಾಗಳಲ್ಲಿ ಒಂದಾಗಿರುವ 'ಜೇಮ್ಸ್' ಚಿತ್ರವನ್ನು ಅಪ್ಪು ಜನ್ಮದಿನವಾದ ಮಾರ್ಚ್ 17ರಂದು ಬಿಡುಗಡೆ ಮಾಡಲು ಆ ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ಹೀಗಾಗಿ ಅಪ್ಪುಗಾಗಿ ರಾಜಮೌಳಿ ತಮ್ಮ ದಾರಿ ಬದಲಿಸಿದ್ದಾರೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.

ಜ್ಯೂನಿಯರ್ ಎನ್‌ಟಿಆರ್, ರಾಮ್​ಚರಣ್ ತೇಜ, ಆಲಿಯಾ ಭಟ್, ಅಜಯ್ ದೇವಗನ್ ಸೇರಿದೊಡ್ಡ ತಾರಾಬಳಗವೇ ಇರುವ ಆರ್​ಆರ್​ಆರ್​​ ಸಿನಿಮಾ ಈಗಾಗಲೇ ಭಾರಿ ಕುತೂಹಲ ಕೆರಳಿಸಿದೆ. ಬರೋಬ್ಬರಿ 450 ಕೋಟಿ ರೂಪಾಯಿ ವೆಚ್ಚದಲ್ಲಿ ಡಿವಿವಿ ದಾನಯ್ಯ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಎಂ.ಎಂ. ಕೀರವಾಣಿ ಸಂಗೀತ ನೀಡಿದ್ದಾರೆ. ಕರ್ನಾಟಕದಲ್ಲಿ ಆರ್​ಆರ್​ಆರ್​ ಸಿನಿಮಾವನ್ನು ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ಸ್​ ವಿತರಣೆ ಮಾಡಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net