ಶಿವರಾಜಕುಮಾರ್​ಗೆ 'ಬುದ್ಧಿವಂತ' ನಿರ್ದೇಶಕನ ನಿರ್ದೇಶನ; ಬರಲಿದೆ ಪ್ಯಾನ್ ಇಂಡಿಯಾ ಸಿನಿಮಾ...

SRK F
Published on

ಬೆಂಗಳೂರು: ಕರೊನಾತಂಕದ ನಡುವೆ ಹೊಸ ಸಿನಿಮಾ ಮಾಡುವುದಿರಲಿ, ಮಾಡಿರುವ ಸಿನಿಮಾ ಬಿಡುಗಡೆ ಮಾಡುವುದೇ ದೊಡ್ಡ ಸವಾಲು ಎಂಬಂತಾಗಿದೆ. ಅಂಥದ್ದರಲ್ಲಿ ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಹೊಸ ಸಿನಿಮಾವೊಂದಕ್ಕೆ ಮುಂದಾಗಿದ್ದಾರೆ.

ಶಿವರಾಜಕುಮಾರ್ ಅವರ ಈ ಚಿತ್ರಕ್ಕೆ 'ಬುದ್ಧಿವಂತ' ನಿರ್ದೇಶಕ ಆ್ಯಕ್ಷನ್​-ಕಟ್ ಹೇಳಲಿದ್ದಾರೆ. ಹಾಗಂತ ಇದು ಉಪೇಂದ್ರ-ಶಿವರಾಜಕುಮಾರ್ ಕಾಂಬಿನೇಷನ್​ನ ಸಿನಿಮಾ ಅಲ್ಲ. ಹಾಗಾದರೆ ಈ ಚಿತ್ರದ ನಿರ್ದೇಶಕ ಯಾರು ಎಂದರೆ ಮತ್ತದೇ ಉಪೇಂದ್ರ ಸಿನಿಮಾದತ್ತವೇ ವಿಷಯ ಹೊರಳುತ್ತದೆ. ಏಕೆಂದರೆ ಉಪೇಂದ್ರ ಅಭಿನಯದ 'ಬುದ್ಧಿವಂತ-2' ಚಿತ್ರವನ್ನು ನಿರ್ದೇಶಿಸಿರುವ ಜಯರಾಂ ಭದ್ರಾವತಿ ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ.

ಇನ್ನಷ್ಟೇ ಬಿಡುಗಡೆ ಆಗಲಿರುವ 'ಬುದ್ಧಿವಂತ-2' ಚಿತ್ರದ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವಾಗಲೇ ಮತ್ತೊಂದು ಸಿನಿಮಾ ನಿರ್ದೇಶನಕ್ಕೆ ಮುಂದಾಗಿರುವ ಜಯರಾಂ, ಶಿವರಾಜಕುಮಾರ್ ಅವರನ್ನು ಭೇಟಿಯಾಗಿ ಕಥೆ ಹೇಳಿದ್ದಾರೆ. ಕಥೆ ಕೇಳಿದ ಅವರು ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ.

ಆರ್. ಕೇಶವ (ರೈತ) ಅವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ನಿರ್ದೇಶಕ ಆರ್. ಚಂದ್ರು ಬಳಿ ಸಹಾಯಕ ನಿರ್ದೇಶಕರಾಗಿದ್ದ ಜಯರಾಂ, ಈ ಹಿಂದೆ ಶಿವರಾಜಕುಮಾರ್ ಅವರ 'ಮೈಲಾರಿ' ಚಿತ್ರದ ನಿರ್ದೇಶನ ವಿಭಾಗದಲ್ಲಿ ತೊಡಗಿಸಿಕೊಂಡಿದ್ದರು.

ಅಂದಿನಿಂದ ಶಿವರಾಜಕುಮಾರ್ ಸಿನಿಮಾಗೆ ಆ್ಯಕ್ಷನ್​-ಕಟ್ ಹೇಳುವ ಕನಸು ಕಟ್ಟಿಕೊಂಡಿದ್ದ ಜಯರಾಂ, ಇದೀಗ ಅದನ್ನು ಸಾಕಾರಗೊಳಿಸಿಕೊಳ್ಳುವಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳೆಲ್ಲ ಮುಗಿದ ಬಳಿಕ ಶಿವರಾಜಕುಮಾರ್ ಈ ಚಿತ್ರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಸದ್ಯ ಪ್ರೊಡಕ್ಷನ್​ ನಂ. 1 ಎಂದು ಚಿತ್ರವನ್ನು ಆರಂಭಿಸಲಾಗಿದ್ದು, ಹೆಚ್ಚಿನ ಮಾಹಿತಿಯನ್ನು ಒಂದೊಂದಾಗಿ ಚಿತ್ರತಂಡ ಬಿಟ್ಟುಕೊಡಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net