ಸುಶಾಂತ್​ ದಿನಾ ಪಿಕಪ್​ ಮಾಡುತ್ತಿದ್ದ ... ಹಳೆಯ ನೆನಪುಗಳನ್ನು ಮೆಲುಕು ಹಾಕಿದ ರಿಚಾ

Richa Chadha - Final
Published on

ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆಯ ನಂತರ, ಅವರ ವ್ಯಕ್ತಿತ್ವದ ಬಗ್ಗೆ ಹಲವು ಬಾಲಿವುಡ್​ ಕಲಾವಿದರು ಮಾತಾಡಿದ್ದಾರೆ. ಸುಶಾಂತ್​ ಗುಣ ಎಂಥದ್ದು, ಅವರ ಇಷ್ಟ-ಕಷ್ಟಗಳೇನು ಮುಂತಾದ ಹಲವು ವಿಷಯಗಳ ಬಗ್ಗೆ ಈಗಾಗಲೇ ಮಾತಾಡಿದ್ದಾರೆ.

ಈಗ ನಟಿ ರಿಚಾ ಚಡ್ಡಾ, ಸಹ ಸುಶಾಂತ್​ ಸಿಂಗ್​ ಅವರನ್ನು ನೆನಪಿಸಿಕೊಂಡಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಸುಧೀರ್ಘ ಪತ್ರ ಬರೆದಿರುವ ಅವರು, ಸುಶಾಂತ್​ ಮತ್ತು ತಮ್ಮ ಗೆಳೆತನದ ಬಗ್ಗೆ ವಿಸ್ತೃತವಾಗಿ ಬರೆದುಕೊಂಡಿದ್ದಾರೆ.

ತಮ್ಮ ಮತ್ತು ಸುಶಾಂತ್​ ಅವರ ಗೆಳೆತನ ಒಂದು ದಶಕಕ್ಕಿಂತ ಹಳೆಯದಾದದ್ದು ಎಂದಿರುವ ಅವರು, 'ನಾನಾಗ ರಂಗಭೂಮಿಯಲ್ಲಿ ಕೆಲಸ ಮಾಡುತ್ತಿದ್ದೆ. ಸುಶಾಂತ್​ ಆಗಷ್ಟೇ ಧಾರಾವಾಹಿಗಳಲ್ಲಿ ನಟಿಸುತ್ತಿದ್ದ. ನಾನು ಮುಂಬೈನ ಅಂಧೇರಿ ವೆಸ್ಟ್​ನ ಒಂದು ಸಣ್ಣ ಅಪಾರ್ಟ್​ಮೆಂಟ್​ನಲ್ಲಿ ನನ್ನ ಸ್ನೇಹಿತೆಯ ಜತೆಗೆ ವಾಸವಿದ್ದೆ. ಸುಶಾಂತ್​ ಪ್ರತಿ ದಿನ ಮನೆಯ ಹತ್ತಿರ ಬಂದು, ನನ್ನನ್ನು ರಿಹರ್ಸಲ್​ಗೆ ಕರೆದೊಯ್ಯುತ್ತಿದ್ದ' ಎಂದು ರಿಚಾ ನೆನಪಿಸಿಕೊಂಡಿದ್ದಾರೆ.

ಈ ವಿಷಯವಾಗಿ ಇನ್ನಷ್ಟು ಬರೆದಿರುವ ಅವರು, 'ನನ್ನ ಹತ್ತಿರ ದುಡ್ಡಿರಲಿಲ್ಲ ಎನ್ನುವ ಕಾರಣಕ್ಕೆ ಅವನು ನನ್ನನ್ನು ಪಿಕಪ್​ ಮಾಡುತ್ತಿರಲಿಲ್ಲ. ನನ್ನ ಹತ್ತಿರ ದುಡ್ಡಿತ್ತು. ಆದರೆ, ಆಟೋದಲ್ಲಿ ಹೋದರೆ ನನ್ನ ಮೇಕಪ್​ ಕರಗಿ ಹೋಗುತ್ತದೆ ಎಂಬ ಭಯವಿತ್ತು. ಹಾಗಾಗಿ ಅವನು ನನ್ನನ್ನು ಪಿಕಪ್​ ಮಾಡುತ್ತಿದ್ದ' ಎಂದು ಹೇಳಿದ್ದಾರೆ ರಿಚಾ.

ಇನ್ನು ಸುಶಾಂತ್​ ಸಾವಿನ ನಂತರ ಎದ್ದಿರುವ ನೆಪೋಟಿಸಂನ ಕೂಗಿನ ಬಗ್ಗೆ ಮಾತನಾಡಿರುವ ಅವರು, 'ನನಗೆ ಯಾವತ್ತೂ ಸ್ಟಾರ್ ಮಕ್ಕಳ ಬಗ್ಗೆ ಬೇಸರವಿಲ್ಲ. ಹೊಸಬರಿಗೆ ಅವರದ್ದೇ ಆದ ಸಮಸ್ಯೆಗಳಿದ್ದರೆ, ಸ್ಟಾರ್​ ಮಕ್ಕಳಿಗೂ ಅವರದ್ದೇ ಆದ ಸಾಕಷ್ಟು ಸಮಸ್ಯೆಗಳಿರುತ್ತವೆ. ಅವರಿಗೆ ಎಂಟ್ರಿ ಸುಲಭವಾಗಿ ಸಿಗಬಹುದು. ಆ ನಂತರ ಅವರು, ಸಹ ಬೇರೆಯವರಂತೆ ಹೋರಾಟ ಮಾಡಿಕೊಂಡೇ ಮುಂದುವರೆಯಬೇಕಾಗುತ್ತದೆ' ಎಂದು ರಿಚಾ ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net