ಬಾಲಿವುಡ್​ ಸ್ಟಾರ್​ಗಳಿಗೆ ಸವಾಲೆಸೆದ ರಾಮ್​ಗೋಪಾಲ್ ವರ್ಮಾ; ಭಾರತೀಯ ಚಿತ್ರರಂಗಕ್ಕೇ ಹೀಗೊಂದು ಪ್ರಪೋಸಲ್ ಇಟ್ರು!

RGV
Published on

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಹಿಂದಿ ಚಲನಚಿತ್ರರಂಗವನ್ನು ಕೆಣಕುತ್ತಲೇ ಬಂದಿರುವ ಖ್ಯಾತ ನಿರ್ದೇಶಕ ರಾಮ್​ಗೋಪಾಲ್ ವರ್ಮಾ ಇದೀಗ ಬಾಲಿವುಡ್​ ಸ್ಟಾರ್​​ಗಳಿಗೆಲ್ಲ ಒಂದು ಸವಾಲೆಸೆದಿದ್ದಾರೆ. ಅಲ್ಲದೆ ಇಡೀ ಭಾರತದ ಚಿತ್ರರಂಗಕ್ಕೆ ಒಂದು ಪ್ರಸ್ತಾವನೆ ಮುಂದಿಟ್ಟಿದ್ದಾರೆ.

ರಣವೀರ್​ ಸಿಂಗ್, ರಣಬೀರ್ ಕಪೂರ್, ಅಜಯ್​ ದೇವಗನ್​, ಅಕ್ಷಯ್​ ಕುಮಾರ್, ಜಾನ್​ ಅಬ್ರಹಾಂ ಮುಂತಾದವರು ತಮ್ಮ ಹಿಂದಿ ಸಿನಿಮಾಗಳನ್ನು ತೆಲುಗು, ಕನ್ನಡ ಮುಂತಾದ ಭಾಷೆಗಳಿಗೂ ಡಬ್​ಮಾಡಿ ಅವರ ಹಿಂದಿ ಸಿನಿಮಾಗಳು ಜಾಸ್ತಿ ಗಳಿಕೆ ಕಾಣುವಂತೆ ಮಾಡಲಿ, ಇದನ್ನು ಅವರು ಸವಾಲಾಗಿ ಸ್ವೀಕರಿಸಲಿ ಎಂದು ವರ್ಮಾ ಹೇಳಿದ್ದಾರೆ.

ದಕ್ಷಿಣ ಭಾರತದ ಯಶ್​, ಪ್ರಭಾಸ್, ರಾಮ್​ಚರಣ್ ತೇಜ, ಜೂ.ಎನ್​ಟಿಆರ್ ಅವರ ಸಿನಿಮಾಗಳು ಹಿಂದಿಗೂ ಡಬ್​ ಆಗಿ ಯಶಸ್ಸು ಗಳಿಸುತ್ತಿರುವುದು ಹಿಂದಿಯ ಸ್ಟಾರ್​ಗಳಾದ ಅಕ್ಷಯ್​ಕುಮಾರ್, ಅಜಯ್ ದೇವಗನ್, ರಣವೀರ್​ಸಿಂಗ್, ರಣಬೀರ್​ ಕಪೂರ್​, ಜಾನ್​ ಅಬ್ರಹಾಂ ಮುಂತಾದವರಿಗೆ ಇರಿಸುಮುರಿಸು ಮೂಡಿಸಿದೆ ಎಂದು ವರ್ಮಾ ಅಭಿಪ್ರಾಯ ಪಟ್ಟಿದ್ದಾರೆ.

ಅಷ್ಟೇ ಅಲ್ಲದೆ, ಭಾಷಾ ಕದನ ನಡೆಸುವ ಬದಲು ಭಾರತದ ಎಲ್ಲ ಸ್ಟಾರ್​ಗಳು ಹಾಗೂ ನಿರ್ದೇಶಕರು ಎಲ್ಲ ಭಾಷೆಗಳಲ್ಲೂ ತಮ್ಮ ಸಿನಿಮಾಗಳನ್ನು ಮಾಡುವಂಥ ಒಂದು ಆರೋಗ್ಯಕರ ಸ್ಪರ್ಧೆ ಉಂಟಾಗಲಿ. ಆ ಮೂಲಕ ಪ್ರೇಕ್ಷಕರು ಎಲ್ಲ ಕಡೆಯಿಂದ ಎಲ್ಲವನ್ನೂ ಸವಿಯುವಂತಾಗಲಿ. ಬಳಿಕ ಭಾರತದ ನಾಗರಿಕರೇ ಯಾರು ಬೆಸ್ಟ್​ ಅಂತ ನಿರ್ಣಯಿಸಲಿ ಎಂಬುದಾಗಿ ರಾಮ್​ಗೋಪಾಲ್ ವರ್ಮಾ ಹೇಳಿದ್ದಾರೆ.

ಸದ್ಯ ಕನ್ನಡ ಹಾಗೂ ತೆಲುಗಿನ ಡಬ್​​ ಸಿನಿಮಾಗಳು ಒರಿಜಿನಲ್ ಹಿಂದಿ ಸಿನಿಮಾಗಳಿಗಿಂತಲೂ ಹೆಚ್ಚಿನ ಗಳಿಕೆ ಕಾಣುತ್ತಿರುವುದು ಹಿಂದಿಯ ಪ್ರೇಕ್ಷಕರು ಕಂಟೆಂಟ್​​ಗೆ ಗಮನ ಕೊಡುತ್ತಿದ್ದಾರೆ ವಿನಃ ಅದು ಎಲ್ಲಿಂದ ಬಂದಿದೆ ಎಂಬುದರ ಕುರಿತು ತಲೆಕೆಡಿಸಿಕೊಳ್ಳುತ್ತಿಲ್ಲ ಎಂಬುದು ಸಾಬೀತಾಗಿದೆ. ಈ ಹಿಂದೆ ಮೈನೆ ಪ್ಯಾರ್​ ಕಿಯಾ, ಹಮ್​ ಆಪ್​ ಕೆ ಕೌನ್ ಮತ್ತು ದಂಗಲ್ ಚಿತ್ರಗಳು ಪ್ರಾದೇಶಿಕ ಭಾಷೆಗಳಿಗೆ ಡಬ್​ ಆಗಿ ಕ್ಲಿಕ್ ಆಗಿದ್ದರೂ ಗಳಿಕೆಯ ವಿಚಾರದಲ್ಲಿ ಅವು ಯಶಸ್ವಿ ಪ್ರಾದೇಶಿಕ ಭಾಷೆಗಳ ಮಟ್ಟಕ್ಕೆ ಬಂದಿರಲಿಲ್ಲ ಎಂದೂ ಆರ್​​ಜಿವಿ ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net