

ಕಳೆದ ವರ್ಷ ಸಾಕಷ್ಟು ಸುದ್ದಿಯಾಗಿದ್ದ 'ನಾಗಮಂಡಲ' ಖ್ಯಾತಿಯ ವಿಜಯಲಕ್ಷ್ಮೀ ಮತ್ತು ರವಿಪ್ರಕಾಶ್ ಪ್ರಕರಣಕ್ಕೆ ಮತ್ತೆ ಜೀವ ಬಂದಿದೆ. ಒಂದು ವರ್ಷದ ಹಿಂದೆ ವಿಜಯಲಕ್ಷ್ಮೀ ಮತ್ತು ರವಿಪ್ರಕಾಶ್ ನಡುವೆ ಕಲಹವಾಗಿ ಸಾಕಷ್ಟು ಸುದ್ದಿಯಾಗಿತ್ತು. ಆ ನಂತರ ಪ್ರಕರಣ ತಣ್ಣಗಾಗಿತ್ತು. ಇನ್ನೇನು ಆ ಪ್ರಕರಣವನ್ನು ಎಲ್ಲರೂ ಮರೆಯುತ್ತಿರಬೇಕಾದರೆ, ರವಿಪ್ರಕಾಶ್ ಹೊಸ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಇಷ್ಟಕ್ಕೂ ಆಗಿದ್ದೇನೆಂದರೆ, ಕಳೆದ ವರ್ಷ ವಿಜಯಲಕ್ಷ್ಮೀ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿದ್ದರು. ಹಣಕಾಸಿನ ಸಮಸ್ಯೆಯಿಂದ ಸಂಕಷ್ಟದಲ್ಲಿದ್ದ ಅವರು, ಆಸ್ಪತ್ರೆ ಬಿಲ್ ಕಟ್ಟಲಾಗದೆ, ಸಹಾಯ ಮಾಡುವಂತೆ ಸೋಷಿಯಲ್ ಮೀಡಿಯಾ ಮೂಲಕ ಮನವಿ ಮಾಡಿಕೊಂಡಿದ್ದರು. ವಿಜಯಲಕ್ಷ್ಮೀ ಅವರ ಮನವಿಯ ಮೇರೆಗೆ ರವಿಪ್ರಕಾಶ್ ಹಣ ಸಹಾಯ ಮಾಡಿದ್ದರು.
ಆ ನಂತರ ಎಲ್ಲವೂ ಚೆನ್ನಾಗಿಯೇ ಇತ್ತು. ಅದೊಂದು ದಿನ ಇದ್ದಕ್ಕಿದ್ದಂತೆಯೇ, ರವಿಪ್ರಕಾಶ್ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ, ರವಿಪ್ರಕಾಶ್ ಬಂಧನವಾಗಬೇಕು ಎಂದು ಒತ್ತಾಯಿಸಿ, ಆಸ್ಪತ್ರೆಯಲ್ಲಿಯೇ ಪ್ರತಿಭಟಿಸಿದ್ದರು. ರವಿಪ್ರಕಾಶ್ ಈ ಪ್ರಕರಣದಲ್ಲಿ ತಾನು ನಿರ್ದೋಷಿ ಎಂದಿದ್ದರು. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದಕ್ಕೆ ಹೋಗಿ, ಸಮಸ್ಯೆ ಎದುರಿಸುವಂತಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದರು.
ಆ ನಂತರ ಈ ಪ್ರಕರಣ ಹೆಚ್ಚು ಸುದ್ದಿಯಾಗಿರಲಿಲ್ಲ. ಈಗ ಆ ಪ್ರಕರಣಕ್ಕೆ ಮತ್ತೆ ಜೀವ ಬಂದಿದ್ದು, ರವಿಪ್ರಕಾಶ್ ಇಂದು ಹೊಸ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಅವರು ಯಾವುದೇ ಕಾರಣಕ್ಕೂ ರಾಜಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ವಿಡಿಯೋದಲ್ಲಿ ಮಾತನಾಡಿರುವ ಅವರು, 'ಇತ್ತೀಚೆಗೆ ವಿಜಯಲಕ್ಷ್ಮೀ ಅವರ ಅಕ್ಕ ಉಷಾದೇವಿ ಬಂದು, ತಪ್ಪಾಗಿದೆ ಕ್ಷಮಿಸಿ ಎಂದು ಹೇಳಿದ್ದಾರೆ. ಆದರೆ, ಈ ಪ್ರಕರಣದಿಂದ ಸಾಕಷ್ಟು ನೊಂದಿದ್ದೇವೆ. ಕಷ್ಟದಲ್ಲಿದ್ದಾರೆ ಎಂಬ ಕಾರಣಕ್ಕೆ ಅವರಿಗೆ ಸಹಾಯ ಮಾಡುವುದಕ್ಕೆ ಹೋಗಿ, ನಾವೇ ಸಮಸ್ಯೆ ಮೈಮೇಲೆ ಎಳೆದುಕೊಳ್ಳುವಂತಾಯಿತು. ಹಾಗಾಗಿ ರಾಜಿ ಪ್ರಶ್ನೆಯೇ ಇಲ್ಲ, ಈಗಾಗಲೇ ಈ ವಿಷಯದಲ್ಲಿ ನ್ಯಾಯಯುತವಾದ ಹೋರಾಟ ಮಾಡುವುದಕ್ಕೆ ನಿರ್ಧರಿಸಿದ್ದು, ಅದನ್ನು ಮುಂದುವರೆಸುತ್ತೇವೆ' ಎಂದು ಹೇಳಿದ್ದಾರೆ.