20 ದಿನಗಳ ಪಯಣವಷ್ಟೇ ಬಾಕಿ ಇದೆ ...

777 Charlie - Final
Published on

ಈ ವರ್ಷ ರಕ್ಷಿತ್​ ಶೆಟ್ಟಿ ಅಭಿನಯದ '777 ಚಾರ್ಲಿ' ಚಿತ್ರ ಬಿಡುಗಡೆಯಾಗುತ್ತದಾ? ಇಂಥದ್ದೊಂದು ಪ್ರಶ್ನೆ ಅವರ ಅಭಿಮಾನಿಗಳನ್ನು ಕಾಡುತ್ತಿದ್ದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಚಿತ್ರ ಇಷ್ಟರಲ್ಲಿ ಬಿಡುಗಡೆಯಾಗಿ, ಹೇಮಂತ್​ ರಾವ್​ ನಿರ್ದೇಶನದ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಚಿತ್ರೀಕರಣ ಸಹ ಪ್ರಾರಂಭವಾಗಿರಬೇಕಿತ್ತು.

ಕರೊನಾ ಮತ್ತು ಲಾಕ್​ಡೌನ್​ನಿಂದಾಗಿ ಈಗ ಅಂದುಕೊಂಡಿದ್ದೆಲ್ಲವೂ ಉಲ್ಟಾ ಆಗಿದೆ. ಸದ್ಯಕ್ಕೆ ಲಾಕ್​ಡೌನ್​ ಮುಗಿದು, ಚಿತ್ರೀಕರಣ ಚಟುವಟಿಕೆಗಳು ಪ್ರಾರಂಭವಾದರೂ ಚಿತ್ರತಂಡ ಇನ್ನೂ ಚಿತ್ರೀಕರಣ ಪ್ರಾರಂಭಿಸುವ ಧೈರ್ಯ ಮಾಡಿಲ್ಲ. ಹಾಗಾಗಿ ಬಾಕಿ ಉಳಿದಿರುವ ಐದು ತಿಂಗಳುಗಳಲ್ಲಿ ಮೊದಲು ಚಿತ್ರೀಕರಣ ಮುಗಿದು, ನಂತರ ಪ್ರಚಾರ ನಡೆದು, ಆ ನಂತರ ಬಿಡುಗಡೆಯಾಗುತ್ತದಾ ಎಂಬುದು ಎಲ್ಲರ ಪ್ರಶ್ನೆ.

ಬಹುಶಃ ಇಲ್ಲೇ ಸುತ್ತಮುತ್ತ ಚಿತ್ರೀಕರಣ ಆಗಿದ್ದರೆ, ಈ ವರ್ಷದ ಕೊನೆಯಲ್ಲಿ ಚಿತ್ರ ಬಿಡುಗಡೆಯಾಗಬಹುದು ಎಂದುಕೊಳ್ಳಬಹುದಿತ್ತು. ಆದರೆ, ಚಿತ್ರೀಕರಣ ನಡೆಯಬೇಕಾಗಿರುವುದು ಹಿಮಾಚಲ ಪ್ರದೇಶದಲ್ಲಿ. ಈಗ ಇನ್ನೂ ಉಳಿದಿರುವ ಐದು ತಿಂಗಳಲ್ಲಿ, ಚಿತ್ರತಂಡ ಮೊದಲು ಚಿತ್ರೀಕರಣ ಮಾಡಿ, ಆ ನಂತರ ಪೋಸ್ಟ್​-ಪ್ರೊಡಕ್ಷನ್​, ಪ್ರಮೋಷನ್​ ಕೆಲಸಗಳೆಲ್ಲಾ ಮುಗಿಸಿ, ವರ್ಷದ ಕೊನೆಯ ಹೊತ್ತಿಗಾದರೂ ಚಿತ್ರ ಬಿಡುಗಡೆಯಾಗುತ್ತದಾ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

ಲಾಕ್​ಡೌನ್​ಗೂ ಮುನ್ನ '777 ಚಾರ್ಲಿ' ಚಿತ್ರತಂಡವು ಹಿಮಾಚಲ ಪ್ರದೇಶದಲ್ಲಿ ಚಿತ್ರೀಕರಣ ಮಾಡುತಿತ್ತು. ಇನ್ನು 20 ದಿನಗಳ ಕಾಲ ಸತತ ಚಿತ್ರೀಕರಣ ಮುಗಿದಿದ್ದರೆ ಕುಂಬಳಕಾಯಿ ಒಡೆಯಬಹುದಿತ್ತು. ಅಷ್ಟರಲ್ಲಿ ಲಾಕ್​ಡೌನ್​ ಘೋಷಣೆಯಾಗಿ, ಚಿತ್ರೀಕರಣ ಚಟುವಟಿಕೆಗಳನ್ನು ನಿಲ್ಲಿಸುವುದಕ್ಕೆ ಆದೇಶಿಸಲಾಯಿತು. ಬಹುಶಃ ಕೆಲವು ದಿನಗಳ ಲಾಕ್​ಡೌನ್​ ಆಗಿದ್ದರೆ, ಚಿತ್ರತಂಡ ಅಲ್ಲೇ ಉಳಿದುಕೊಂಡು, ಚಿತ್ರೀಕರಣ ಪೂರ್ತಿ ಮುಗಿಸಿ ಬರುತಿತ್ತೇನೋ? ಆದರೆ, ಎಷ್ಟು ದಿನಗಳು ಎಂದು ಗೊತ್ತಿಲ್ಲದಿದ್ದರಿಂದ, ಚಿತ್ರೀಕರಣ ನಿಲ್ಲಿಸಿ ಕರ್ನಾಟಕಕ್ಕೆ ವಾಪಸ್ಸಾಗಿದೆ.

ಈಗ ಕರೊನಾ ಹಾವಳಿ ಕಡಿಮೆಯಾದ ಮೇಲೆ, ಚಿತ್ರತಂಡ ಮತ್ತೆ ಹಿಮಾಚಲ ಪ್ರದೇಶಕ್ಕೆ ಹೋಗಿ ಬಾಕಿ ಇರುವ 20 ದಿನಗಳ ಚಿತ್ರೀಕರಣವನ್ನು ಮೊದಲು ಮುಗಿಸಬೇಕಿದೆ. ಆ ನಂತರ ಮಿಕ್ಕ ಮಾತು.

ಈ ಕುರಿತು ಮಾತನಾಡಿರುವ ರಕ್ಷಿತ್​ ಶೆಟ್ಟಿ, 'ನಮಗೆ ಹೆಚ್ಚು ಜನರ ಅವಶ್ಯಕತೆಯೂ ಇಲ್ಲ. 25 ಜನರ ತಂಡವಿದ್ದರೆ ಚಿತ್ರೀಕರಣ ಮಾಡಬಹುದು. ಆದರೆ, ಅದಕ್ಕೆ ಮೊದಲು ಅನುಮತಿ ಸಿಗಬೇಕು. ಆ ನಂತರ ಹೋಗಿ, ಚಿತ್ರೀಕರಣ ಮಾಡಿಕೊಂಡು ಬರುತ್ತೇವೆ. ಈಗಾಗಲೇ ಚಿತ್ರೀಕರಣವಾಗಿರುವ ಭಾಗದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಮುಗಿದಿವೆ. ಇನ್ನು ಚಿತ್ರೀಕರಣ ಯಾವಾಗ ಎಂಬ ಸ್ಪಷ್ಟತೆ ಸಿಕ್ಕರಷ್ಟೇ, ಬಿಡುಗಡೆಯ ಬಗ್ಗೆ ಹೇಳಬಹುದು. ಈಗಲೇ ಚಿತ್ರದ ಬಿಡುಗಡೆಯ ಬಗ್ಗೆ ಹೇಳುವುದು ಕಷ್ಟ' ಎನ್ನುತ್ತಾರೆ ರಕ್ಷಿತ್​ ಶೆಟ್ಟಿ.

'777 ಚಾರ್ಲಿ' ಚಿತ್ರವನ್ನು ಕಿರಣ್​ ರಾಜ್​ ನಿದೇಶಿಸುತ್ತಿದ್ದಾರೆ. ಚಿತ್ರದಲ್ಲಿ ರಕ್ಷಿತ್​, ಸಂಗೀತ ಶೃಂಗೇರಿ, ರಾಜ್​ ಬಿ ಶೆಟ್ಟಿ, ದಾನಿಶ್​ ಸೇಠ್​ ಮುಂತಾದವರು ನಟಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net