ಅಜ್ಜಿಯಾಗುವುದಕ್ಕೆ 60 ವರ್ಷ ಆಗಿರಬೇಕು ಅಂತೇನಿಲ್ಲ ಅಂತಾರೆ ರವೀನಾ

Raveena-Tandon
Published on

ಮುಂಬೈ: ಬಾಲಿವುಡ್​ನಲ್ಲಿ ಒಂದು ಕಾಲಕ್ಕೆ ತಮ್ಮ ಚೆಲುವು ಮತ್ತು ಅಭಿನಯದಿಂದ ಗಮನ ಸೆಳೆದವರು ರವೀನಾ ಟಂಡನ್​. ಅವರೀಗ ಅಜ್ಜಿಯಾಗಿದ್ದಾರೆ ಎಂದರೆ ಬಹಳಷ್ಟು ಜನ ನಂಬಲಿಕ್ಕಿಲ್ಲ. ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ಬರಬಹುದು. ಆದರೂ ಇದು ನಿಜ.

ರವೀನಾ ಟಂಡನ್​ ಮದುವೆಯಾಗುವುದಕ್ಕೆ ಬಹಳ ಮುಂಚೆಯೇ, ಅಂದರೆ ತಮ್ಮ 21ನೇ ವಯಸ್ಸಿನಲ್ಲೇ ಪೂಜಾ ಮತ್ತು ಛಾಯಾ ಎಂಬ ಹುಡುಗಿಯರನ್ನು ದತ್ತು ತೆಗೆದುಕೊಂಡಿದ್ದರು. ಈ ಮೂಲಕ ಸಿಂಗಲ್​ ಮದರ್​ ಆಗಿದ್ದರು. ಆ ಸಂದರ್ಭದಲ್ಲಿ ಪೂಜಾಗೆ 11 ವರ್ಷವಾಗಿದ್ದರೆ, ಛಾಯಾಗೆ ಏಳು ವರ್ಷವಾಗಿತ್ತು. ಇದೀಗ ಅವರಿಬ್ಬರಿಗೂ ಮಕ್ಕಳಾಗಿರುವುದರಿಂದ, ರವೀನಾ ಅಜ್ಜಿಯಾಗಿದ್ದಾರೆ. ಹಾಗೆ, ನೋಡಿದರೆ, ರವೀನಾಗೆ ಈಗಿನ್ನೂ 46 ವರ್ಷವಷ್ಟೇ. ಅಷ್ಟರಲ್ಲಾಗಲೇ ಅಜ್ಜಿಯಾಗಿರುವ ಅವರು, ಅದರಲ್ಲಿ ತಪ್ಪೇನಿದೆ ಎನ್ನುತ್ತಾರೆ.

ಸಾಮಾನ್ಯವಾಗಿ ಅಜ್ಜಿ ಎಂದರೆ ಅವರಿಗೆ 60 ವರ್ಷವಾಗಿರಬೇಕು ಎಂಬ ಕಲ್ಪನೆ ನಮ್ಮಲ್ಲಿ ಇದೆ. ನಾನು ಚಿಕ್ಕವಯಸ್ಸಿನಲ್ಲೇ ಇಬ್ಬರು ಮಕ್ಕಳನ್ನು ದತ್ತು ತೆಗೆದುಕೊಂಡೆ. ಅವರಿಗೀಗ ಮಕ್ಕಳಾಗಿದ್ದು, ಈ ಮೂಲಕ ನಾನು ಅಜ್ಜಿಯಾಗಿದ್ದೇನೆ ಎಂದು ರವೀನಾ ಹೇಳಿದ್ದಾರೆ.

ರವೀನಾ ತಮ್ಮ 21ನೇ ವಯಸ್ಸಿಗೆ ಇಬ್ಬರು ಮಕ್ಕಳನ್ನು ದತ್ತು ಪಡೆದಾಗ ಹಲವರು aದು ತಪ್ಪು ನಿರ್ಧಾರ ಎಂದಿದ್ದರಂತೆ. ಅಷ್ಟೇ ಅಲ್ಲ, ರವೀನಾ ಅವರನ್ನು ಮದುವೆಯಾಗುವುದಕ್ಕೆ ಯಾರೂ ಮುಂದೆ ಬರುವುದಿಲ್ಲ ಎಂದು ಭವಿಷ್ಯ ನುಡಿದಿದ್ದರಂತೆ. ಇದನ್ನು ಸುಳ್ಳು ಮಾಡಿದ ರವೀನಾ, ಖ್ಯಾತ ವಿತರಕ ಅನಿಲ್​ ಥಡಾನಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಅನಿಲ್​ ಮತ್ತು ರವೀನಾ ದಂಪತಿಗೆ ಇಬ್ಬರು ಮಕ್ಕಳಿದ್ದು, ಅವರಿನ್ನೂ ಓದುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net