

ನವದೆಹಲಿ : ನಿನ್ನೆ ಮಾಜಿ ಸಂಸದ ಹಾಗೂ ಬಾಲಿವುಡ್ ನಟ ಪರೇಶ್ ರಾವಲ್ ಅವರು ನಿಧನ ಹೊಂದಿದ್ದಾರೆ ಎಂದು ಜಾಲತಾಣದಲ್ಲಿ ಸುಳ್ಳು ವದಂತಿಗಳು ಹರಡಿದ್ದವು. ಇದಕ್ಕೆ ನಗೆ ತರಿಸುವಂಥ ಪ್ರತಿಕ್ರಿಯೆಯನ್ನು ರಾವಲ್ ಅವರು ಖುದ್ದು ಟ್ವೀಟ್ ಮಾಡಿ ನೀಡಿದ್ದಾರೆ.
'ಚಲನಚಿತ್ರೋದ್ಯಮದ ಭಾಗವಾದ ಪರೇಶ್ ರಾವಲ್ ಶುಕ್ರವಾರ (ಮೇ 14) ಬೆಳಿಗ್ಗೆ 7 ಗಂಟೆಗೆ ನಿಧನರಾಗಿದ್ದಾರೆ' ಎಂಬ ಸಂದೇಶವನ್ನು ಲಾಫ್ಟರ್ ಹೌಸ್ ಎಂಬ ಖಾತೆದಾರರು ಮತ್ತಿತರರು ನಿನ್ನೆ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಅದಕ್ಕೆ ಸಂಜೆಯ ವೇಳೆಗೆ ಉತ್ತರ ನೀಡಿದ ರಾವಲ್ ಅವರು, "ನಾನು 7 ಗಂಟೆಗೂ ಮೀರಿ ನಿದ್ದೆ ಮಾಡಿದ್ದರಿಂದ ಉಂಟಾದ ತಪ್ಪು ತಿಳುವಳಿಕೆಗೆ ಕ್ಷಮೆ ಇರಲಿ" ಎಂದು ಹಾಸ್ಯಯುತವಾಗಿ ಬರೆದರು.
ಇದಕ್ಕೆ ಹಲವು ನೆಟ್ಟಿಗರು ಲೈಕುಗಳನ್ನು ಮಳೆಗರೆದರೆ, ಕೆಲವರು, ಈ ರೀತಿ ಸುಳ್ಳು ಮಾಹಿತಿ ಹರಡಿದ ಜನರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಗರಂ ಆಗಿ ಉತ್ತರ ನೀಡಿದ್ದಾರೆ. ಮತ್ತೆ ಹಲವರು ರಾವಲ್ ಅವರಿಗೆ ದೇವರು ದೀರ್ಘಾಯುಷ್ಯ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಸೆಲೆಬ್ರಿಟಿಗಳ ಬಗ್ಗೆ ಸಾವಿನ ಸುಳ್ಳು ಹರಡಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ಮಹಾಭಾರತ ಧಾರಾವಾಹಿಯ ಭೀಷ್ಮ ಪಾತ್ರಧಾರಿ ಮತ್ತು ಶಕ್ತಿಮಾನ್ ನಟ ಮುಕೇಶ್ ಖನ್ನ ಅವರ ಸಾವಿನ ವದಂತಿಗಳೂ ಹರಡಿದ್ದವು. ಅದಕ್ಕೆ ಖನ್ನ ಅವರು ನಾನು ಚೆನ್ನಾಗೇ ಇದ್ದೀನಿ ಎಂದು ವಿಡಿಯೋ ಪೋಸ್ಟ್ ಮಾಡಿ ಪ್ರತಿಕ್ರಿಯಿಸಿದ್ದರು. (ಏಜೆನ್ಸೀಸ್)