ಜೀ5ನಲ್ಲಿ ರಶ್ಮಿ ರಾಕೆಟ್ ... ಒಟಿಟಿಯಲ್ಲಿ ತಾಪ್ಸಿ ಹ್ಯಾಟ್ರಿಕ್

Tapsee Pannu - Final
Published on

ಮುಂಬೈ: ತಾಪ್ಸಿ ಪನ್ನು ಅಭಿನಯದ ‘ಥಪ್ಪಡ್’ ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು ಬಿಟ್ಟರೆ, ಇನ್ನೆರಡು ಚಿತ್ರಗಳು ಒಟಿಟಿಯ ಮಾರ್ಗ ಹಿಡಿದಿವೆ. ಕೆಲವು ತಿಂಗಳುಗಳ ಹಿಂದೆ ತಾಪ್ಸಿ ಅಭಿನಯದ ‘ಹಸೀನ್ ದಿಲ್ರುಬಾ’ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿತ್ತು. ‘ಅನಬೆಲ್ಲಾ ಸೇತುಪತಿ’ ಎಂಬ ತಮಿಳು ಚಿತ್ರ ಇತ್ತೀಚೆಗೆ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ತೆರೆಕಂಡಿತ್ತು. ಇದೀಗ ತಾಪ್ಸಿಯ ಇನ್ನೊಂದು ಚಿತ್ರ ಸಹ ಒಟಿಟಿಯಲ್ಲಿ ಬಿಡುಗಡೆಯಾಗುತ್ತದೆ. ‘ರಶ್ಮಿ ರಾಕೆಟ್’ ಎನ್ನುವ ಈ ಹೆಸರಿನ ಚಿತ್ರವು ಅಕ್ಟೋಬರ್ 15ರಿಂದ ಜೀ5ನಲ್ಲಿ ಸ್ಟ್ರೀಮ್ ಆಗಲಿದೆ. ಈ ಮೂಲಕ ತಾಪ್ಸಿ ಅಭಿನಯದ ಮೂರು ಚಿತ್ರಗಳು ಬ್ಯಾಕ್ ಟು ಬ್ಯಾಕ್ ಒಟಿಟಿಯಲ್ಲಿ ಬಿಡುಗಡೆಯಾದಂತಾಗುತ್ತದೆ.

ಸಣ್ಣ ಹಳ್ಳಿಯೊಂದರ ರಶ್ಮಿ ಎಂಬ ಯುವತಿಯೊಬ್ಬಳು ತನ್ನ ಅಸಾಧರಣ ಶಕ್ತಿ ಮತ್ತು ಛಲದಿಂದ ದೊಡ್ಡ ಅಥ್ಲೀಟ್ ಆಗಿ ಹೇಗೆ ಹೊರಹೊಮ್ಮುತ್ತಾಳೆ ಮತ್ತು ದೇಶಕ್ಕೆ ಕೀರ್ತಿ ತರುತ್ತಾಳೆ ಎಂಬ ಕಥೆಯಿರುವ ಈ ಚಿತ್ರವನ್ನು ಆಕಾಶ್ ಖುರಾನಾ ನಿರ್ದೇಶನ ಮಾಡಿದ್ದಾರೆ. ಕ್ರೀಡೆಯಾಧಾರಿತ ಚಿತ್ರವಾದ್ದರಿಂದ ಇದೊಂದು ಬಯೋಪಿಕ್ ಎಂದೆನಿಸಬಹುದು. ಆದರೆ, ಇದು ಬಯೋಪಿಕ್ ಅಲ್ಲವಂತೆ. ನಂದ ಪೆರಿಯಸ್ವಾಮಿ ಎಂಬ ತಮಿಳು ನಿರ್ದೇಶಕರ ಕಥೆಯನ್ನು ಆಧರಿಸಿ ಈ ಚಿತ್ರ ಮಾಡಲಾಗಿದೆ.

‘ರಶ್ಮಿ ರಾಕೆಟ್’ ಚಿತ್ರದಲ್ಲಿ ತಾಪ್ಸಿ ಜತೆಗೆ ಪ್ರಿಯಾಂಶು, ಅಭಿಷೇಕ್ ಬ್ಯಾನರ್ಜಿ, ಸುಪ್ರಿಯಾ ಪಾಥಕ್ ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net