ತಮ್ಮ ಮುಂದಿನ ಚಿತ್ರದ ಆಫರ್​ ತಿರಸ್ಕರಿಸಿದ ಸಾಯಿ ಪಲ್ಲವಿಗೆ ಮೆಗಾಸ್ಟಾರ್ ಮೆಚ್ಚುಗೆ: ಅಚ್ಚರಿಯ ಕಾರಣ ಇಲ್ಲಿದೆ..!

Sai Pallavi
Published on

ಹೈದರಾಬಾದ್​: ನಟಿ ಸಾಯಿ ಪಲ್ಲವಿ ದಕ್ಷಿಣ ಭಾರತ ಚಿತ್ರರಂಗದಲ್ಲೇ ಬಹು ಬೇಡಿಕೆಯ ನಟಿ. ತನ್ನ ಡ್ಯಾನ್ಸ್​ನಿಂದಲೇ ಅಸಂಖ್ಯಾತ ಅಭಿಮಾನಿಗಳನ್ನು ಸಂಪಾದಿಸಿರುವ ಸಾಯಿ ಪಲ್ಲವಿ ಸಹಜ ಸೌಂದರ್ಯ ಮತ್ತು ಸಹಜ ನಟನೆಯಿಂದಲೂ ಜನಮನ್ನಣೆ ಗಳಿಸಿದ್ದಾರೆ. ಅನೇಕ ಬ್ಲಾಕ್​ ಬಸ್ಟರ್​ ಸಿನಿಮಾಗಳಲ್ಲಿ ನಟಿಸಿರುವ ಸಾಯಿ ಪಲ್ಲವಿಯ ಡೇಟ್ಸ್​ಗಾಗಿ ಅನೇಕ ನಿರ್ಮಾಪಕರು ಕ್ಯೂನಲ್ಲಿ ನಿಂತಿದ್ದಾರೆ.

ಆದರೆ, ಯಾವುದೇ ಸಿನಿಮಾವನ್ನು ಸಾಯಿ ಪಲ್ಲವಿ ಸುಮ್ಮನ್ನೇ ಒಪ್ಪಿಕೊಳ್ಳುವುದಿಲ್ಲ. ತನ್ನ ಪಾತ್ರಕ್ಕೆ ಒಂದು ಮಹತ್ವ ಹಾಗೂ ಆ ಪಾತ್ರದಲ್ಲಿ ಏನಾದರೂ ಒಳ್ಳೆಯ ಅಂಶವಿದ್ದರೆ ಮಾತ್ರ ಸಾಯಿ ಪಲ್ಲವಿ ಆ ಚಿತ್ರಕ್ಕೆ ಗ್ರೀನ್​ ಸಿಗ್ನಲ್​ ನೀಡುತ್ತಾರೆ. ನಟ ಯಾರೇ ಆಗಿರಲಿ ಸಾಯಿ ಪಲ್ಲವಿ ತಲೆ ಕೆಡಿಸಿಕೊಳ್ಳುವುದಿಲ್ಲ ಎನ್ನುವುದಕ್ಕೆ ಇತ್ತೀಚಿನ ಒಂದು ಘಟನೆಯೇ ತಾಜಾ ಉದಾಹರಣೆ.

ಸಾಯಿ ಪಲ್ಲವಿ ಸದ್ಯ ನಾಗಚೈತನ್ಯ ಅಭಿನಯದ ಲವ್​ ಸ್ಟೋರಿ ಚಿತ್ರದಲ್ಲಿ ನಟಿಸಿದ್ದು, ಆ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ನಿನ್ನೆ ಈ ಚಿತ್ರದ ಪ್ರೀ ರಿಲೀಸ್​ ಈವೆಂಟ್​ ನಡೆಯಿತು. ಈ ಕಾರ್ಯಕ್ರಮದಲ್ಲಿ ಆಮೀರ್​ ಖಾನ್​ ಮತ್ತು ಮೆಗಾಸ್ಟಾರ್​ ಚಿರಂಜೀವಿ ಭಾಗವಹಿಸಿದ್ದರು. ಈ ವೇಳೆ ಘಟನೆಯೊಂದನ್ನು ಮೆಲಕು ಹಾಕಿದ ಚಿರಂಜೀವಿ ಸಾಯಿ ಪಲ್ಲವಿಯನ್ನು ಮನಸಾರೆ ಹೊಗಳಿದರು.

ಚಿರಂಜೀವಿ ಹೊಗಳಿಕೆಗೆ ಕಾರಣವೇನೆಂದು ನೋಡಿದಾಗ ತಮ್ಮ ಮುಂದಿನ ಭೋಲಾ ಶಂಕರ್​ ಸಿನಿಮಾದಲ್ಲಿ ಸಾಯಿ ಪಲ್ಲವಿ ಸಹೋದರಿಯಾಗಿ ನಟಿಸಬೇಕಿತ್ತಂತೆ. ಆದರೆ, ಆ ಆಫರ್​ ಅನ್ನು ಸಾಯಿ ಪಲ್ಲವಿ ತಿರಸ್ಕರಿಸಿದ್ದಾರೆ. ಹೀಗಾಗಿ ಸಾಯಿ ಪಲ್ಲವಿ ಬದಲಾಗಿ ರಾಷ್ಟ್ರ ಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್​ ಅವರನ್ನು ಸಹೋದರಿ ಪಾತ್ರಕ್ಕೆ ಆಯ್ಕೆ ಮಾಡಲಾಗಿದೆ.

ಪ್ರೀ ರಿಲೀಸ್​ ಈವೆಂಟ್​ನಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ ಚಿರಂಜೀವಿ, ಪ್ರೇಮಮಂ ಖ್ಯಾತಿಯ ಸಾಯಿ ಪಲ್ಲವಿ ಅವರನ್ನು ತಂಗಿಯ ಪಾತ್ರಕ್ಕೆ ಸಂಪರ್ಕಿಸುವುದಾಗಿ ನಮ್ಮ ಚಿತ್ರತಂಡ ಹೇಳಿದಾಗ, ಸಾಯಿ ಪಲ್ಲವಿ ಒಪ್ಪಿಕೊಳ್ಳದಿದ್ದರೆ ಸಾಕು ಎಂದು ನಾನು ಪಾರ್ಥಿಸಿದೆ. ಅದೃಷ್ಟವಶಾತ್​ ಸಾಯಿ ಪಲ್ಲವಿ ಆಫರ್​ ನಿರಾಕರಿಸಿದರು. ನಾನು ಏನು ಅಂದುಕೊಂಡನೋ ಹಾಗೇ ನಡೆದಿದ್ದಕ್ಕೆ ಖುಷಿಯಾಯಿತು ಎಂದಿದ್ದಾರೆ.

ಈ ವೇಳೆ ತಕ್ಷಣ ಮೈಕ್​ ತೆಗೆದುಕೊಂಡ ಸಾಯಿ ಪಲ್ಲವಿ, ಯಾವಾಗಲು ರಿಮೇಕ್​ ಸಿನಿಮಾಗಳನ್ನು ಮಾಡುವುದಕ್ಕೆ ನನಗೆ ಭಯವಾಗುತ್ತದೆ. ಈ ಕಾರಣಕ್ಕೆ ನಾನು ಆಫರ್​ ತಿರಸ್ಕರಿಸಿದೆ ಎಂದು ಸಾಯಿ ಪಲ್ಲವಿ ಹೇಳಿದರು. ಇದಕ್ಕೆ ಉತ್ತರಿಸಿದ ಚಿರಂಜೀವಿ ನನ್ನ ಚಿತ್ರದಲ್ಲಿ ನಿಮ್ಮನ್ನು ನಾಯಕಿಯಾಗಿ ನೋಡಲು ಇಷ್ಟಪಡುತ್ತೇನೆ ಹೊರತು ತಂಗಿ ಪಾತ್ರದಲ್ಲಲ್ಲ ಎಂದರು. ಇದೇ ವೇಳೆ ಸಾಯಿ ಪಲ್ಲವಿ ಮುಂದಿನ ಚಿತ್ರದಲ್ಲಿ ಅವಕಾಶ ನೀಡುವಂತೆ ಚಿರಂಜೀವಿ ಅವರನ್ನು ಮನವಿ ಮಾಡಿಕೊಂಡರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net