ಮೂರು ಸೆಕೆಂಡ್​ಗಳಲ್ಲಿ 'ಸರ್ಕಸ್​' ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡರಂತೆ ರಣವೀರ್​ ಸಿಂಗ್​

Ajay Devgan - Ranveer Singh
Published on

ಮುಂಬೈ: ರೋಹಿತ್​ ಶೆಟ್ಟಿ ನಿರ್ದೇಶನದ ಮತ್ತು ರಣವೀರ್​ ಸಿಂಗ್ ಅಭಿನಯದ 'ಸರ್ಕಸ್​' ಚಿತ್ರವು ಕಳೆದ ಶುಕ್ರವಾರ ಜಗತ್ತಿನಾದ್ಯಂತ ಬಿಡುಗಡೆಯಾಗಿದೆ. ಅಷ್ಟೇ ಅಲ್ಲ, ಚಿತ್ರ ಈಗಾಗಲೇ ಫ್ಲಾಪ್​ ಪಟ್ಟಿ ಸೇರಿಯಾಗಿದೆ. ಚಿತ್ರ ನೋಡಿದವರು ಅಷ್ಟೇನೂ ಒಳ್ಳೆಯ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ. ಇನ್ನು, ಬಾಕ್ಸ್​ಆಫೀಸ್​ನಲ್ಲಂತೂ ಚಿತ್ರವನ್ನು ಕೇಳುವವರೇ ಇಲ್ಲ.

ಈ ಚಿತ್ರದಲ್ಲಿ ನಟಿಸುವುದಕ್ಕೆ ರಣವೀರ್​ ಸಿಂಗ್​, ಕೇವಲ ಮೂರು ಸೆಕೆಂಡ್​ಗಳಲ್ಲಿ ಒಪ್ಪಿಕೊಂಡರಂತೆ ಗೊತ್ತಾ? ಈ ವಿಷಯವ್ನ್ನು ಅವರೇ ಸ್ವತಃ ಹೇಳಿಕೊಂಡಿದ್ದಾರೆ. 'ಲಾಕ್​ಡೌನ್​ ಸಂದರ್ಭದಲ್ಲಿ ಅದೊಂದು ದಿನ ನಾನು ಟ್ರೆಡ್​ಮಿಲ್​ನಲ್ಲಿದ್ದೆ. ಆ ಸಂದರ್ಭದಲ್ಲಿ ರೋಹಿತ್​ ಅವರ ಫೋನ್​ ಬಂತು. ಒಂದು ಸಿನಿಮಾ ಇದೆ, ಮಾಡ್ತೀಯಾ ಎಂದರು, ನಾನು ತಕ್ಷಣ ಒಪ್ಪಿಕೊಂಡೆ. ಚಿತ್ರ ಒಪ್ಪುವುದಕ್ಕೆ ನಾನು ತೆಗೆದುಕೊಂಡಿದ್ದು ಕೇವಲ ಮೂರು ಸೆಕೆಂಡ್​' ಎಂದು ಹೇಳಿಕೊಂಡಿದ್ದಾರೆ.

ಬರೀ ರಣವೀರ್​ ಸಿಂಗ್​ ಅಷ್ಟೇ ಅಲ್ಲ, ರಣವೀರ್​ ಸಿಂಗ್​ ತರಹ ಅಜಯ್​ ದೇವಗನ್​ ಸಹ ಕಥೆ ಕೇಳದೆ ಒಪ್ಪಿಕೊಳ್ಳುತ್ತಾರಂತೆ ಮತ್ತು 'ಸಿಂಗಂ' ಚಿತ್ರವನ್ನು ಅವರು ಮೊದಲು ಒಪ್ಪಿಕೊಂಡು ಆ ನಂತರ ಕಥೆ ಕೇಳಿದರಂತೆ. 'ಅಜಯ್​ ದೇವಗನ್​ ಸಹ ಅದೇ ತರಹ. ಒಂದೆರೆಡು ಸಿನಿಮಾಗಳ ನಂತರ ಅವರು ಕಥೆ ಕೇಳುವುದನ್ನು ಬಿಟ್ಟರು. 'ಸಿಂಗಂ' ಆಗಿದ್ದು ಇದೇ ತರಹ. ಮೊದಲು ಒಪ್ಪಿದರು. ಆ ನಂತರ ಮಧ್ಯರಾತ್ರಿ ಕಥೆ ಕೇಳಿದರು. ಬೆಳಿಗ್ಗೆ ಶೂಟಿಂಗ್​ ಪ್ರಾರಂಭಿಸಿದರು. 'ಗೋಲ್​ಮಾಲ್​' ನಂತರ ಅವರು ಕಥೆ ಕೇಳುವುದನ್ನೇ ಬಿಟ್ಟುಬಿಟ್ಟಿದ್ದಾರೆ' ಎಂದು ರೋಹಿತ್​ ಶೆಟ್ಟಿ ಹೇಳಿದ್ದಾರೆ.

'ಸರ್ಕಸ್​' ಚಿತ್ರವು ವಿಲಿಯಂ ಶೇಕ್​ಸ್ಪಿಯರ್​ನ 'ದಿ ಕಾಮಿಡಿ ಆಫ್​ ಎರರ್ಸ್​' ನಾಟಕವನ್ನು ಆಧರಿಸಿದ್ದು, ಈ ಚಿತ್ರದಲ್ಲಿ ರಣವೀರ್​ ಸಿಂಗ್​ ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಜತೆಗೆ ಪೂಜಾ ಹೆಗ್ಡೆ, ಜಾಕ್​ಲೀನ್​ ಫರ್ನಾಂಡಿಸ್​, ಜಾನಿ ಲಿವರ್​, ಸಂಜಯ್​ ಮಿಶ್ರ ಮುಂತಾದವರು ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net