

ರಕ್ಷಿತ್ ಶೆಟ್ಟಿ ನಿರ್ವಣದ ಎರಡು ಚಿತ್ರಗಳು ಗುರುವಾರ ಪ್ರಾರಂಭವಾಗಿವೆ. ದಿಗಂತ್ ಮತ್ತು ರಿಷಬ್ ಶೆಟ್ಟಿ ಅಭಿನಯದ ‘ಬ್ಯಾಚುಲರ್ ಪಾರ್ಟಿ’ ಒಂದಾದರೆ, ಎರಡನೆಯದು ವಿಹಾನ್ ಮತ್ತು ಅಂಕಿತಾ ಅಮರ್ ಅಭಿನಯದ ‘ಇಬ್ಬನಿ ತುಂಬಿದ ಇಳೆಯಲಿ’. ಈ ಎರಡೂ ಚಿತ್ರಗಳನ್ನು ಹೊಸಬರು ನಿರ್ದೇಶನ ಮಾಡುತ್ತಿದ್ದಾರೆ. ಮೊದಲನೆಯದನ್ನು ಅಭಿಜಿತ್ ಮಹೇಶ್ ನಿರ್ದೇಶಿಸಿದರೆ, ಎರಡನೆಯದನ್ನು ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶಿಸುತ್ತಿದ್ದಾರೆ. ಈ ಎರಡು ಚಿತ್ರಗಳು ಸೇರಿದರೆ, ಪರಂವಃ ನಿರ್ವಿುಸುತ್ತಿರುವ ಚಿತ್ರಗಳ ಸಂಖ್ಯೆ ಆರಾಗುತ್ತದೆ. ಈ ಪೈಕಿ ಐದು ಚಿತ್ರಗಳನ್ನು ಹೊಸಬರು ನಿರ್ದೇಶನ ಮಾಡುತ್ತಿರುವುದು ವಿಶೇಷ. ನಿಜ ಹೇಳಬೇಕೆಂದರೆ, ಪರಂವಃ ಶುರು ಮಾಡಿದ್ದೇ ಹೊಸಬರಿಗೆ ಅವಕಾಶ ಕೊಡುವುದಕ್ಕೆ ಎನ್ನುತ್ತಾರೆ ರಕ್ಷಿತ್.
‘ನಾನು ಸೆವೆನ್ ಆಡ್ಸ್ ಎಂಬ ಬರಹಗಾರರ ತಂಡ ಮಾಡಿದಾಗ, ನನಗೆ ಅವರಿಂದ ಈಗ ಎಷ್ಟು ಸಹಾಯ ಆಗುತ್ತದೆ ಎನ್ನುವುದಕ್ಕಿಂತ, ನಾಳೆ ಅವರು ಒಳ್ಳೆಯ ನಿರ್ದೇಶಕರಾದರೆ ಚಿತ್ರರಂಗಕ್ಕೆ ಸಹಾಯವಾಗುತ್ತದೆ ಎಂಬ ನಂಬಿಕೆಯಿಂದ ಮಾಡಿದೆ. ಒಬ್ಬ ಒಳ್ಳೆಯ ನಿರ್ದೇಶಕನಿಗೆ ಇದಕ್ಕಿಂತ ಒಳ್ಳೆಯ ಸಮಯ ಸಿಗುವುದಿಲ್ಲ. ಒಂದು ಸಿನಿಮಾ ಚೆನ್ನಾಗಿ ಮಾಡಿದರೆ, ಓಟಿಟಿ, ಟಿವಿಯಲ್ಲೇ ಹಣ ಮಾಡಬಹುದು. ಡಬ್ಬಿಂಗ್ ಮತ್ತು ಬೇರೆ ಹಕ್ಕುಗಳಿಂದಲೂ ದುಡ್ಡು ಬರುತ್ತದೆ. ಅವೆಲ್ಲ ಸಣ್ಣ ಪ್ರಮಾಣದ ಹಣವಾದರೂ, ಒಟ್ಟಿಗೆ ಕೂಡಿಸಿದರೆ ದೊಡ್ಡ ಮೊತ್ತವಾಗುತ್ತದೆ. ದೊಡ್ಡ ರಿಸ್ಕ್ ಇಲ್ಲದೆ, ಎಲ್ಲರನ್ನೂ ಸೇಫ್ ಆಗಿಸುವಂತಹ ಮತ್ತು ಒಳ್ಳೆಯ ಸಿನಿಮಾ ಮಾಡುವುದಕ್ಕೆ ಎಷ್ಟು ಸಾಧ್ಯವೋ ಅದನ್ನು ಮಾಡುತ್ತಿದ್ದೇನೆ’ ಎನ್ನುತ್ತಾರೆ ರಕ್ಷಿತ್. ಪರಂವಃ ಸಂಸ್ಥೆಯನ್ನು ದೊಡ್ಡ ಮಟ್ಟದಲ್ಲಿ ಬೆಳೆಸಬೇಕು, ನಿರಂತರವಾಗಿ ಚಿತ್ರಗಳನ್ನು ಮಾಡಬೇಕು ಎನ್ನುವುದು ರಕ್ಷಿತ್ ಆಸೆಯಂತೆ. ‘ಚಿತ್ರಗಳಲ್ಲದೆ ವೆಬ್ಸಿರೀಸ್ ಮಾಡುವ ಯೋಚನೆಯೂ ಇದೆ. ಇಲ್ಲಿ ಎಲ್ಲರಿಗೂ ತಮ್ಮದೇ ತಂಡಗಳನ್ನು ಕಟ್ಟಿಕೊಂಡು ಚಿತ್ರ ಮಾಡುವ ಸ್ವಾತಂತ್ರ್ಯವಿದೆ. ಇದು ಬರೀ ನನ್ನ ಸಂಸ್ಥೆಯಷ್ಟೇ ಅಲ್ಲ, ಸೆವೆನ್ ಆಡ್ಸ್ ತಂಡದವರಿಗೂ ಶೇರ್ ಸಿಗಬೇಕು. ಅವರು ಸಹ ಸಂಸ್ಥೆಯನ್ನು ಬೆಳೆಸಬೇಕು. ಒಟ್ಟಾರೆ ಕಾರ್ಪೆರೇಟ್ ಶೈಲಿಯಲ್ಲಿರಬೇಕು ಎಂಬುದು ನನ್ನ ಆಸೆ. ನನ್ನ ನಿರ್ದೇಶನದ ‘ರಿಚರ್ಡ್ ಆಂಟೋನಿ’ ಶುರುವಾದರೆ, ನಿರ್ವಣದಲ್ಲಿ ದೊಡ್ಡ ಮಟ್ಟದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಿಲ್ಲ. ಅಷ್ಟರಲ್ಲಿ ಎಲ್ಲ ವಿಭಾಗಗಳಲ್ಲೂ ಒಂದು ತಂಡ ಸೆಟ್ ಮಾಡಿ, ಅವರೇ ಮುಂದೆ ನೋಡಿಕೊಂಡು ಹೋಗುವ ಹಾಗಿರಬೇಕು’ ಎನ್ನುತ್ತಾರೆ ರಕ್ಷಿತ್. ಇನ್ನು, ‘ರಿಚರ್ಡ್ ಆಂಟೋನಿ’ ಕುರಿತು ಮಾತನಾಡುವ ಅವರು, ‘ಮೊದಲು ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಎರಡನೆಯ ಹಂತದ ಚಿತ್ರೀಕರಣ ಮುಗಿಸಬೇಕು. ಅಕ್ಟೋಬರ್ನಲ್ಲಿ ಚಿತ್ರೀಕರಣ ಮುಗಿಯಲಿದ್ದು, ನವೆಂಬರ್ನಿಂದ ‘ರಿಚರ್ಡ್ ಆಂಟೋನಿ’ ಕೆಲಸ ಶುರುವಾಗಲಿದೆ. ಆ ಚಿತ್ರವು ‘ಉಳಿದವರು ಕಂಡಂತೆ’ ಚಿತ್ರದ ಮುಂದುವರಿದ ಭಾಗವೂ ಹೌದು, ಹಿಂದಿನ ಭಾಗವೂ ಹೌದು. ಹೊಸದು, ಹಳೆಯದು ಎರಡೂ ಇರುತ್ತದೆ’ ಎನ್ನುತ್ತಾರೆ.
ರಕ್ಷಿತ್ ಸಿನಿಮಾದಲ್ಲಿ ಸಖತ್ ಬಿಜಿಯಾಗಿದ್ದಾರೆ. ಹೀಗಿರುವಾಗ ವೈಯಕ್ತಿಕ ಜೀವನದ ಕಥೆ ಏನು? ಮದುವೆ ಯಾವಾಗ? ಎಂಬ ಪ್ರಶ್ನೆ ಸಹಜ. ಈ ಪ್ರಶ್ನೆಯನ್ನು ಅವರ ಮುಂದಿಟ್ಟರೆ, ‘ಸದ್ಯ ಮದುವೆ ವಿಷಯವನ್ನು ತಲೆಯಿಂದ ತೆಗೆದಿದ್ದೇನೆ. ಏನು ಬರೆದಿದೆಯೋ ಹಾಗೆ ಆಗುತ್ತದೆ. ಆಗಬೇಕು ಅಂತಿದ್ದರೆ ಆಗುತ್ತದೆ’ ಎಂದು ಹೇಳುತ್ತಾರೆ. ರಕ್ಷಿತ್ ಮದುವೆಗೆ ಕುಟುಂಬದವರಿಂದ ಒತ್ತಡವಿದೆಯಂತೆ. ಆದರೆ, ಅವರೇ ಮನೆ ಆಗಲಿ ಎಂದು ಮುಂದೂಡುತ್ತಿದ್ದಾರಂತೆ. ‘ಮೊದಲೆಲ್ಲಾ ಅಮ್ಮ ಮದುವೆ ಬಗ್ಗೆ ಮಾತಾಡಿದಾಗ, ಸಿನಿಮಾ ಮುಗಿಯಲಿ ಎಂದು ತಡ ಮಾಡುತ್ತಿದ್ದೆ. ಈಗ ಮನೆ ಮುಗಿಯಲಿ ಅಂತ ಮುಂದೂಡುತ್ತಿದ್ದೇನೆ. ಮುಂದಿನ ವರ್ಷದ ಕೊನೆಗೆ ಮನೆ ರೆಡಿಯಾಗುತ್ತದೆ. ಸಿನಿಮಾ ಮಾಡೋಕೆ ಏನು ಬೇಕೋ ಅವೆಲ್ಲವನ್ನೂ ಮನೆಯಲ್ಲಿ ಮಾಡಿ ಕೊಂಡಿದ್ದೀನಿ’ ಎನ್ನುತ್ತಾರೆ ರಕ್ಷಿತ್.