ರಜಿನಿಕಾಂತ್ ಆರೋಗ್ಯದಲ್ಲಿ ಚೇತರಿಕೆ: ಇಂದು ಸಂಜೆ ಆಸ್ಪತ್ರೆಯಿಂದ ಡಿಸ್ಚಾರ್ಜ್​

Rajinikanth
Published on

ಚೆನ್ನೈ: ರಕ್ತದೊತ್ತಡದ ತೀವ್ರ ಏರುಪೇರಿನಿಂದಾಗಿ ಶುಕ್ರವಾರ ಆಸ್ಪತ್ರೆಗೆ ದಾಖಲಾಗಿದ್ದ ಸೂಪರ್​ಸ್ಟಾರ್​ ರಜಿನಿಕಾಂತ್ ಅವರು ಇಂದು ಸಂಜೆ (ಡಿ.26) ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಲಿದ್ದಾರೆ.

ನಿನ್ನೆ ಹೈದರಾಬಾದ್​ನ ಅಪೋಲೋ ಆಸ್ಪತ್ರೆಗೆ ರಜಿನಿಕಾಂತ್​ ದಾಖಲಾಗಿದ್ದರು. ಇದೀಗ ಚೇತರಿಸಿಕೊಳ್ಳುತ್ತಿದ್ದು, ಇಂದು ಸಂಜೆ ಡಿಸ್ಚಾರ್ಜ್​ ಆಗಲಿದ್ದಾರೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ರಜಿನಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಚಿಂತೆಗೀಡಾಗಿದ್ದ ಅಭಿಮಾನಿಗಳಿಗೆ ರಜಿನಿ ಚೇತರಿಕೆ ಸುದ್ದಿ ಸಂತಸ ತಂದಿದೆ. ಸಾಕಷ್ಟು ಸಿನಿ ಕಲಾವಿದರು ಸಹ ರಜಿನಿ ಚೇತರಿಕೆ ಹಾರೈಸಿದ್ದರು.

ಅಂದಹಾಗೆ ರಜಿನಿಕಾಂತ್​ ಅವರು ತಮ್ಮ ಅಭಿನಯದ ‘ಅಣ್ಣಾತ್ತೆ’ ಚಿತ್ರತಂಡದ ನಾಲ್ವರಲ್ಲಿ ಕರೊನಾ ಪಾಸಿಟಿವ್​ ಬಂದ ಹಿನ್ನೆಲೆಯಲ್ಲಿ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ರಜಿನಿಕಾಂತ್​ ಪ್ರತ್ಯೇಕವಾಗಿದ್ದರು. ರಕ್ತದೊತ್ತಡದಲ್ಲಿ ಏರಿಳಿತದ ಸಮಸ್ಯೆಯಿಂದ ಹೈದರಾಬಾದ್​ನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಗುರುವಾರವಷ್ಟೇ ರಜಿನಿ ಅವರಿಗೆ ಕರೊನಾ ನೆಗಿಟಿವ್​ ವರದಿಯಾಗಿತ್ತು.

ರಜನಿಕಾಂತ್​ ಅವರು ‘ಅಣ್ಣಾತ್ತೆ’ ಚಿತ್ರವನ್ನು ಜನವರಿ 12ರೊಳಗೆ ಮುಗಿಸಬೇಕು ಎಂದು ಪ್ಲಾನ್​ ಹಾಕಿಕೊಂಡಿದ್ದರು. ಅದಕ್ಕಾಗಿ ಕಳೆದ ಕೆಲವು ದಿನಗಳಿಂದ, ಪ್ರತಿದಿನ 12 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರು. ಚಿತ್ರೀಕರಣ ಸಹ ಸಾಕಷ್ಟು ಮುಗಿದಿತ್ತು. ಎಲ್ಲಾ ಚೆನ್ನಾಗಿ ನಡೆಯುತ್ತಿರುವಾಗ, ಚಿತ್ರತಂಡದ ನಾಲ್ವರಿಗೆ ಕರೊನಾ ಪಾಸಿಟಿವ್​ ಬಂದಿರುವುದರಿಂದ ಚಿತ್ರೀಕರಣ ಅನಿವಾರ್ಯವಾಗಿ ಮುಂದಕ್ಕೆ ಹೋಗಿದೆ.

ಇಷ್ಟಕ್ಕೂ ರಜನಿಕಾಂತ್​ ಅವರಿಗೆ ತುರ್ತಾಗಿ ಚಿತ್ರ ಮುಗಿಸುವುದಕ್ಕೂ ಒಂದು ಕಾರಣವಿದೆ. ಮುಂದಿನ ವರ್ಷ ತಮಿಳುನಾಡಿನಲ್ಲಿ ಚುನಾವಣೆಗಳು ನಡೆಯಲಿದ್ದು, ಅದರಲ್ಲಿ ರಜನಿಕಾಂತ್​ ಅವರ ರಾಜಕೀಯ ಪಕ್ಷ ಸಹ ಸ್ಪರ್ಧಿಸಲಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಒಪ್ಪಿಕೊಂಡಿರುವ ‘ಅಣ್ಣಾತ್ತೆ’ ಚಿತ್ರದ ಚಿತ್ರೀಕರಣವನ್ನು ಆದಷ್ಟು ಬೇಗ ಮುಗಿಸುವುದು ಅವರ ಯೋಚನೆ. ಆದರೆ, ಇದೀಗ ಚಿತ್ರ ಮುಗಿಯುವುದು ಇನ್ನಷ್ಟು ತಡವಾಗಲಿದೆ.

‘ಅಣ್ಣಾತ್ತೆ’ ಚಿತ್ರದಲ್ಲಿ ರಜನಿಕಾಂತ್ ಜೊತೆಗೆ ನಯನತಾರಾ, ಖುಷ್ಬೂ, ಮೀನಾ, ಕೀರ್ತಿ ಸುರೇಶ್​ ಮುಂತಾದವರು ನಟಿಸುತ್ತಿದ್ದು, ಶಿವಾ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net