ಮಹಿಳಾ ಸಚಿವೆಯ ಆನ್​ಲೈನ್​ ಭಾಷಣದ ವೇಳೆ ನೋಡಬಾರದ್ದನ್ನು ನೋಡಿ ಸಿಕ್ಕಿಬಿದ್ದ ಸಂಸದ!

Russia MP
Published on

ಮಾಸ್ಕೋ: ಸಂಸದೀಯ ಅಧಿವೇಶನ ಉದ್ದೇಶಿಸಿ ಮಹಿಳಾ ಸಚಿವೆಯೊಬ್ಬರು ಮಾತನಾಡುವಾಗ ಆಕೆಯ ಎದೆಯನ್ನೇ ದಿಟ್ಟಿಸಿ ನೋಡಿದ್ದಾಗಿ ರಷ್ಯಾ ಸಂಸದನೊಬ್ಬ ತಪ್ಪೊಪ್ಪಿಕೊಂಡಿರುವುದು ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಓರ್ವ ಆರೋಗ್ಯಕರ ವ್ಯಕ್ತಿಯಾಗಿ ನಾನು ನನ್ನ ಕಣ್ಣುಗಳನ್ನು ನಿಮ್ಮ ದೇಹದ ಬೆತ್ತಲೆ ಭಾಗದ ಮೇಲೆ ಕೇಂದ್ರೀಕರಿಸಿದ್ದೆ ಎಂದು ಸಂಸದ ಪಯೋಟರ್ ಅಮ್ಮೊಸೊವ್ (54), ಸಚಿವೆ ವೈಸೋಖಿಕ್ (34) ನೇರವಾಗಿ ಹೇಳಿದ್ದಾರೆ.

ಆನ್‌ಲೈನ್ ಅಧಿವೇಶನದಲ್ಲಿ ಕಡಿಮೆ ಆಲ್ಕೊಹಾಲ್ ಪಾನೀಯಗಳ ಕುರಿತು ನೀವು​ ಮಾಡಿದ ಭಾಷಣವನ್ನು ಗಮನದಿಂದ ಕೇಳದಂತೆ ನಿಮ್ಮ ದೇಹ ಸೌಂದರ್ಯ ತಡೆಯಿತು ಸಂಸದರು ಹೇಳಿದ್ದು, ಇದೀಗ ತೀವ್ರ ಟೀಕೆ ವ್ಯಕ್ತವಾಗಿದೆ. ಇದು ಸರಿಯಲ್ಲ ಎಂದು ನನಗೆ ತಿಳಿದಿದೆ ನಿಜ ಆದರೆ, ಓರ್ವ ಪುರುಷನಾಗಿ ಅದರ ಸೌಂದರ್ಯವನ್ನು ಒಪ್ಪಿಕೊಳ್ಳಲೇಬೇಕು ಎಂದು ಸಂಸದ ಹೇಳಿಕೊಂಡಿದ್ದಾರೆ.

ಸಂಸದನಿಗೆ ತಿರುಗೇಟು ನೀಡಿರುವ ವೈಸೋಖಿಕ್, ನಾನು ಖಂಡಿತವಾಗಿಯೂ ನನ್ನ ನೋಟವನ್ನು ನಿಮ್ಮೊಂದಿಗೆ ಚರ್ಚಿಸುವುದಿಲ್ಲ ಎಂದರು. ಈ ವೇಳೆ ಮಧ್ಯ ಪ್ರವೇಶಿಸಿದ ಸ್ಪೀಕರ್​ ಯಾವುದೇ ಕಾಮೆಂಟ್​ ಮಾಡಬೇಡಿ ನಿಮ್ಮ ವರದಿಯನ್ನು ಪ್ರಸ್ತುತಪಡಿಸಿ ಎಂದು ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರು.

ಆದರೆ, ಸ್ಪೀಕರ ಸಹ ಪರೋಕ್ಷವಾಗಿ ಸಂಸದನ ಬೆಂಬಲಕ್ಕೆ ನಿಂತಿದ್ದು ಗಮನಕ್ಕೆ ಬಂದಿತು. ಸಂಸದರ ಮೇಲೆ ಕಾಮೆಂಟ್​ ಮಾಡುವ ಹಕ್ಕು ನಿಮಗಿಲ್ಲ ಎಂದ ಸ್ಪೀಕರ್​, ಇದು ನಿಮ್ಮ ಮೇಲಾಧಿಕಾರಿತನ ತೋರುತ್ತದೆ ಎಂದರು. ಇದೇ ವೇಳೆ ಸಚಿವೆ ಸಂಸದನ ವಿರುದ್ಧ ಪ್ರತಿಭಟನೆ ನಡೆಸುವಾಗ ಅವರ ಮೈಕ್ರೋಫೋನ್​ ಸೈಲೆಂಟ್​ನಲ್ಲಿರುವಂತೆ ಗೋಚರವಾಯಿತು. ಅಲ್ಲದೆ, ಸಂಸದ, ಸಚಿವೆ ಕುರಿತು ಅಸಭ್ಯವಾಗಿ ಮಾತನಾಡುತ್ತಿದ್ದರೆ ಸ್ಪೀಕರ್​ ಮಧ್ಯಪ್ರವೇಶಿಸಿ ತಡೆಯುವ ಪ್ರಯತ್ನವನ್ನು ಮಾಡಲಿಲ್ಲ.

ಇನ್ನಿತರ ಸಂಸದರು ಸಚಿವೆಗೆ ಕ್ಷಮೆಯಾಚಿಸಿ, ಅಶ್ಲೀಲ ಎನಿಸುವ ಅಂಶ ಅವರ ಉಡುಪಿನಲ್ಲಿ ಇಲ್ಲ ಎಂದು ಅವರ ಬೆಂಬಲಕ್ಕೆ ನಿಂತರು. ಇದೇ ವೇಳೆ ಸಂಸದೆ ವಿಕ್ತರ್​ ಫೈಡೊರೊವ್​ ಎಂಬಾಕೆ ಗಂಭೀರ ಆರೋಪ ಮಾಡಿದರು. ಅನೇಕ ಸಂಸದರು ಅವರ ಡ್ರೆಸ್​ ಅನ್ನು ದಿಟ್ಟಿಸಿ ಬೇರೆ ದೃಷ್ಟಿಯಲ್ಲಿ ನೋಡುತ್ತಾರೆಂದು ಆರೋಪಿಸಿದರು.

ಸಂಸದ ಪಯೋಟರ್ ಅಮ್ಮೊಸೊವ್ ಹೇಳಿಕೆ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಕಾನೂನು ಕ್ರಮಕ್ಕೆ ಸಚಿವೆ ಆಗ್ರಹಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net