ಅವರಿಬ್ಬರನ್ನು ನಂಬಿ ಕೆಟ್ಟೆ... ಶಾರುಖ್​​, ದೀಪಿಕಾ ವಿರುದ್ಧ ದೂರು ದಾಖಲಿಸಿದ ರಾಜಸ್ಥಾನ ವ್ಯಕ್ತಿ! Deepika Padukone, SRK

Deepika Padukone, SRK
Published on

Deepika Padukone, SRK : ಬಾಲಿವುಡ್ ಬಾದ್​ಷಾ ಶಾರುಖ್ ಖಾನ್ ಮತ್ತು ಸ್ಟಾರ್​ ನಟಿ ದೀಪಿಕಾ ಪಡುಕೋಣೆ ವಿರುದ್ಧ ಪ್ರಕರಣ ದಾಖಲಿಸಲು ನ್ಯಾಯಾಲಯ ಆದೇಶ ಹೊರಡಿಸಿದ್ದು, ಇಬ್ಬರ ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ.

ರಾಜಸ್ಥಾನದ ಭರತ್‌ಪುರ ನಿವಾಸಿ ಕೀರ್ತಿ ಸಿಂಗ್ ಸಲ್ಲಿಸಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಶಾರುಖ್, ದೀಪಿಕಾ ಪಡುಕೋಣೆ ಹಾಗೂ ಹುಂಡೈ ಕಂಪನಿಯ ಆರು ಅಧಿಕಾರಿಗಳ ವಿರುದ್ಧ ತಾಂತ್ರಿಕ ದೋಷವುಳ್ಳ ಕಾರನ್ನು ಮಾರಾಟ ಮಾಡಿದ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿದೆ.

ಕೀರ್ತಿ ಸಿಂಗ್ ಸಲ್ಲಿಸಿದ ದೂರಿನಲ್ಲಿ ಏನಿದೆ?

2022, ಜೂನ್ ತಿಂಗಳಲ್ಲಿ ಸುಮಾರು 24 ಲಕ್ಷ ರೂ.ಗಳಿಗೆ ಹುಂಡೈ ಅಲ್ಕಾಜರ್ ಕಾರನ್ನು ಕೀರ್ತಿ ಸಿಂಗ್​ ಖರೀದಿ ಮಾಡಿದರು. ಇದಾದ ಕೇವಲ ಆರು ತಿಂಗಳೊಳಗೆ ಕಾರಿನ ಇಂಜಿನ್‌ನಲ್ಲಿ ಹಲವಾರು ತಾಂತ್ರಿಕ ಸಮಸ್ಯೆಗಳು ಉದ್ಭವಿಸಿದವು. ಅತಿ ವೇಗದಲ್ಲಿ ಹೋಗುವಾಗ, ಇಂಜಿನ್‌ನಿಂದ ದೊಡ್ಡ ಶಬ್ದ ಬರುತ್ತಿತ್ತು ಮತ್ತು ಕೆಲವೊಮ್ಮೆ ಅದು ರಸ್ತೆಯ ಮಧ್ಯದಲ್ಲೇ ಕೆಟ್ಟು ನಿಲ್ಲುತ್ತಿತ್ತು. ಇದರಿಂದ ನಮ್ಮ ಕುಟುಂಬ ಸಾಕಷ್ಟು ಸಮಸ್ಯೆಯನ್ನು ಕೂಡ ಅನುಭವಿಸಿದೆ ಎಂದು ಸಿಂಗ್​ ಹೇಳಿದ್ದಾರೆ. ಕಾರು ಸಮಸ್ಯೆಯ ಬಗ್ಗೆ ಕಂಪನಿ ಏಜೆನ್ಸಿಯನ್ನು ಸಂಪರ್ಕಿಸಿದಾಗ, ಅಲ್ಲಿನ ಸಿಬ್ಬಂದಿ ಕಾರು ಮಾದರಿಯ ಉತ್ಪಾದನಾ ದೋಷವಾಗಿದ್ದು ಅದನ್ನು ಸರಿಪಡಿಸಲು ಸಾಧ್ಯವಿಲ್ಲ ಎಂದರು ಅಂತ ಸಿಂಗ್​ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅಲ್ಕಾಜರ್ ಮಾದರಿಯಲ್ಲಿನ ತಿಳಿದಿರುವ ದೋಷಗಳನ್ನು ಮರೆಮಾಚಲು ಹುಂಡೈ ಅಧಿಕಾರಿಗಳು ಪಿತೂರಿ ನಡೆಸಿದ್ದಾರೆ ಮತ್ತು ಗ್ರಾಹಕರನ್ನು ವಂಚಿಸಿದ್ದಾರೆ ಎಂದು ಸಿಂಗ್ ಆರೋಪಿಸಿದ್ದಾರೆ. ಕಾರನ್ನು ಬದಲಾಯಿಸಲು ಅಥವಾ ಖರೀದಿ ಮೊತ್ತವನ್ನು ಬಡ್ಡಿಯೊಂದಿಗೆ ಮರುಪಾವತಿಸಲು ನಿರಾಕರಿಸುವುದು ವಂಚನೆ ಮತ್ತು ನಂಬಿಕೆಯ ಉಲ್ಲಂಘನೆಯಾಗಿದೆ. ದೋಷಯುಕ್ತ ಉತ್ಪನ್ನವನ್ನು ಪ್ರಚಾರ ಮಾಡಿದ್ದಕ್ಕಾಗಿ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅವರನ್ನು ಹೊಣೆಗಾರರನ್ನಾಗಿ ಮಾಡಿದ್ದು, ಈ ಕಾರಿನ ಬಗ್ಗೆ ಅವರು ನೀಡಿದ ಜಾಹೀರಾತು ಗ್ರಾಹಕರನ್ನು ದಾರಿ ತಪ್ಪಿಸಿವೆ ಎಂದು ಸಿಂಗ್​ ಆರೋಪಿಸಿದ್ದಾರೆ.

ಬಳಿಕ ಸಿಂಗ್​ ಅವರು ಹುಂಡೈನ ಬ್ರಾಂಡ್ ಅಂಬಾಸಿಡರ್‌ಗಳಾದ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅವರ ಮೇಲೆ ಹೊಣೆಗಾರಿಕೆ ಹೊರಿಸುವಂತೆ ಭರತ್‌ಪುರದ ಸಿಜೆಎಂ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ, ಅವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಮನವಿ ಮಾಡಿದರು. ಅದರಂತೆ, ನ್ಯಾಯಾಲಯವು ಮಥುರಾ ಗೇಟ್ ಪೊಲೀಸ್ ಠಾಣೆಗೆ ಸೆಕ್ಷನ್ 420 (ವಂಚನೆ) ಮತ್ತು ಇತರ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸುವಂತೆ ನಿರ್ದೇಶಿಸಿತು. ಅದೇ ರೀತಿ ಪ್ರಕರಣ ದಾಖಲಾಗಿದೆ.

ಅಂದಹಾಗೆ, ಶಾರುಖ್ ಖಾನ್ ಅವರು 1998 ರಿಂದ ಕಂಪನಿಯ ಬ್ರ್ಯಾಂಡ್‌ನೊಂದಿಗೆ ಸಂಬಂಧ ಹೊಂದಿದ್ದಾರೆ. ದೀಪಿಕಾ ಪಡುಕೋಣೆ ಡಿಸೆಂಬರ್ 2023 ರಿಂದ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. 2024 ರಲ್ಲಿ ಜಾಹೀರಾತಿನಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ತಪ್ಪುದಾರಿಗೆಳೆಯುವ ಜಾಹೀರಾತುಗಳಿಗೆ ಸೆಲೆಬ್ರಿಟಿಗಳು ಮತ್ತು ಅನುಮೋದಕರನ್ನು ಹೊಣೆಗಾರರನ್ನಾಗಿ ಮಾಡಬೇಕೆಂದು ಸುಪ್ರೀಂ ಕೋರ್ಟ್ ಈ ಹಿಂದೆ ಆದೇಶಿಸಿತ್ತು. ಈ ಸಂದರ್ಭದಲ್ಲಿ, ಶಾರುಖ್ ಮತ್ತು ದೀಪಿಕಾ ಮತ್ತು ಕಂಪನಿಯ ಆರು ಉದ್ಯೋಗಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net