ಬಿಗ್ ನ್ಯೂಡ್ ಬೋಟ್: ಐಷಾರಾಮಿ ಹಡಗಿನಲ್ಲಿ 11 ದಿನ ನಗ್ನ ಪ್ರವಾಸ, ಇದರಲ್ಲಿವೆ ಹಲವು ಅಚ್ಚರಿಯ ಸೌಲಭ್ಯಗಳು! World Biggest Nude Cruise

World Biggest Nude Cruise
Published on

World Biggest Nude Cruise : ಈ ಆಧುನಿಕ ಜಗತ್ತಿನಲ್ಲಿ ಸಾಕಷ್ಟು ವಿಚಿತ್ರ ಹಾಗೂ ನಮ್ಮನ್ನು ಅಚ್ಚರಿಗೊಳಿಸುವಂತಹ ಸಾಕಷ್ಟು ಘಟನೆಯನ್ನು ನಾವು ಕಂಡಿದ್ದೇವೆ ಮತ್ತು ಕೇಳಿದ್ದೇವೆ. ನಿಜಕ್ಕೂ ಹೀಗೆಲ್ಲ ನಡೆಯುತ್ತಾ ಅಂತ ನಮ್ಮನ್ನೇ ನಾವು ಪ್ರಶ್ನೆ ಮಾಡಿಕೊಂಡಿದ್ದೇವೆ. ಇನ್ನು ಈ ಕಣ್ಣಲ್ಲಿ ಏನೇನು ನೋಡಬೇಕೋ ಮತ್ತು ಈ ಕಿವಿಯಲ್ಲಿ ಏನೇನು ಕೇಳಬೇಕೋ ಅಂತ ಉದ್ಘರಿಸಿದ್ದು ಉಂಟು. ಅಂತಹ ವಿಚಿತ್ರ ಸಂಗತಿಗಳ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದೆ.

ಹೌದು, ನೀವು ಹಡಗುಗಳ ಬಗ್ಗೆ ಕೇಳಿದ್ದೀರಿ. ಅಲ್ಲದೇ ನೋಡಿರುತ್ತೀರಿ. ಟೈಟಾನಿಕ್​ನಂತಹ ಐಷಾರಾಮಿ ಹಡಗು ಇಂದಿಗೂ ಜನಮಾನಸದಲ್ಲಿ ಉಳಿದಿದೆ. ಅಂತಹ ಸಾವಿರಾರು ಲಕ್ಷುರಿ ಹಡಗುಗಳು ಈ ಜಗತ್ತಿನಲ್ಲಿವೆ. ಇಂತಹ ಹಡಗುಗಳ ಒಳಗಡೆ ರೆಸ್ಟೋರೆಂಟ್​, ಸ್ವಿಮ್ಮಿಂಗ್​ ಪೂಲ್​, ಪಾರ್ಕ್​, ಥಿಯೇಟರ್​ ಹಾಗೂ ಆಟದ ಮೈದಾನ ಸೇರಿದಂತೆ ಅನೇಕ ಐಷಾರಾಮಿ ಸೌಲಭ್ಯಗಳಿರುವುದನ್ನು ನೋಡಿ ನಾವು ಹುಬ್ಬೇರಿಸಿದ್ದೇವೆ. ಇಂತಹ ಐಷಾರಾಮಿ ಹಡಗುಗಳಲ್ಲಿನ ಪ್ರಯಾಣ ಸಾಮಾನ್ಯ ಜನರಿಗೆ ಕನಸಿನ ಮಾತು. ಅಂತಹ ಹಡಗುಗಳಲ್ಲಿ ಪ್ರಯಾಣ ಮಾಡಬೇಕೆಂದರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕು. ಇದೆಲ್ಲ ಉಳ್ಳವರಿಗೆ ಮಾತ್ರ ಸುಲಭವಾಗಿ ಕೈಗೆಟಕುತ್ತದೆ.

ಆದರೆ, ನಾವಿಂದು ನಿಮಗೆ ಪರಿಚಯ ಮಾಡಲು ಹೊರಟಿರುವ ಹಡಗು ಕೂಡ ಭಾರಿ ಲಕ್ಷುರಿ ಹಡಗು. ಆದರೆ, ಈ ಹಡಗಿಗೂ ಉಳಿದ ಐಷಾರಾಮಿ ಹಡಗಿಗೂ ಒಂದು ವ್ಯತ್ಯಾಸವಿದೆ. ಅದೇನೆಂದರೆ, ಈ ಹಡಗಿನಲ್ಲಿ ಯಾರೂ ಬಟ್ಟೆ ಧರಿಸುವುದಿಲ್ಲ. ಅಂದರೆ, ಈ ಹಡಗಿನಲ್ಲಿ ಸಂಚಾರ ಮಾಡುವ ಎಲ್ಲ ಪ್ರಯಾಣಿಕರು ಒಂದು ಚೂರು ಬಟ್ಟೆಯನ್ನು ಧರಿಸದೇ ಬೆತ್ತಲಾಗಿ ಪ್ರಯಾಣ ಮಾಡುತ್ತಾರೆ.

ಅಂದಹಾಗೆ ಈ ಹಡಗಿನ ಹೆಸರು ಬಿಗ್ ನ್ಯೂಡ್ ಬೋಟ್ (Big Nude Boat). ಇದನ್ನು ಅಮೆರಿಕ ಮೂಲದ ಬೇರ್ ನೆಸೆಸಿಟೀಸ್ ಟೂರ್ & ಟ್ರಾವೆಲ್ (Bare Necessities Tour & Travel) ಎಂಬ ಕಂಪನಿ ನಡೆಸುತ್ತದೆ. ನಗ್ನತೆಯನ್ನು ಒಪ್ಪಿಕೊಳ್ಳುವಂತಹ ಒಂದು ವಿಶಿಷ್ಟ ಕ್ರೂಸ್ (ನೌಕಾಯಾನ) ಆಗಿದೆ. ಬಹಳ ವರ್ಷಗಳಿಂದ ಇಂಥದ್ದೊಂದು ಪ್ರವಾಸ ಯೋಜಿಸುತ್ತಾ ಬರುತ್ತಿದೆ. ಕೆರಿಬಿಯನ್​ ತಾಣದಲ್ಲಿ ಬಟ್ಟೆಯಿಲ್ಲದೇ ರಜಾ ದಿನಗಳನ್ನು ಮೋಜಿನಿಂದ ಕಳೆಯಲು ಇಚ್ಛಿಸುವ ಪ್ರವಾಸಿಗರಿಗೆ ಇದೊಂದು ವಾರ್ಷಿಕ ಸಂಪ್ರದಾಯವಾಗಿಬಿಟ್ಟಿದೆ. ಇದೀಗ ಆ ಸಮಯ ಮತ್ತೆ ಬರುತ್ತಿದೆ. ಈ ಕ್ರೂಸ್ 2026ರ ಫೆಬ್ರವರಿ 9ರಿಂದ 20ರವರೆಗೆ ಮಿಯಾಮಿಯಿಂದ ಕೆರಿಬಿಯನ್‌ಗೆ 11 ದಿನಗಳ ಪ್ರವಾಸ ಕೈಗೊಂಡಿದೆ. ಈ ಕ್ರೂಸ್ ನಾರ್ವೇಜಿಯನ್ ಕ್ರೂಸ್ ಲೈನ್‌ನ “ನಾರ್ವೇಜಿಯನ್ ಪರ್ಲ್” ಹಡಗಿನಲ್ಲಿ ನಡೆಯಲಿದ್ದು, ಇದು ಸುಮಾರು 2,300 ಪ್ರಯಾಣಿಕರನ್ನು ಒಳಗೊಂಡಿರುತ್ತದೆ.

ಪರಿಕಲ್ಪನೆ ಏನು?

ಈ ಪ್ರವಾಸದ ಪರಿಕಲ್ಪನೆ ತುಂಬಾ ಸರಳವಾಗಿದೆ. ಅದೇನೆಂದರೆ, ಒಂದು ಐಷಾರಾಮಿ ನಾರ್ವೇಜಿಯನ್ ಕ್ರೂಸ್ ಲೈನ್ ಹಡಗನ್ನು ತೆಗೆದುಕೊಂಡು, ಬಟ್ಟೆಗಳನ್ನು ಧರಿಸದೆ ಪ್ರಕೃತಿಯನ್ನು ಆನಂದಿಸುವ ಜನರನ್ನು ಆ ಹಡಗಿನಲ್ಲಿ ತುಂಬಿಕೊಂಡು, ಸುಂದರ ದ್ವೀಪಗಳಿಗೆ ಪ್ರಯಾಣ ಬೆಳೆಸುವುದು.

ಪ್ರವಾಸದ ವಿವರ

ಈ ಕ್ರೂಸ್ ಮಿಯಾಮಿಯಿಂದ ಆರಂಭವಾಗಿ ಕೆರಿಬಿಯನ್‌ನ ಎಬಿಸಿ ದ್ವೀಪಗಳಾದ ಅರುಬಾ, ಬೊನೈರ್, ಕುರಾಸಾವೊ, ಜಮೈಕಾದ ಒಚೊ ರಿಯೊಸ್ ಮತ್ತು ನಾರ್ವೇಜಿಯನ್ ಕ್ರೂಸ್ ಲೈನ್‌ನ ಖಾಸಗಿ ದ್ವೀಪವಾದ ಗ್ರೇಟ್ ಸ್ಟಿರಪ್ ಕೇಯ್‌ನಲ್ಲಿ ಎರಡು ಬಾರಿ ತಂಗುವಿಕೆಯನ್ನು ಒಳಗೊಂಡಿದೆ. ಈ ಖಾಸಗಿ ದ್ವೀಪದಲ್ಲಿ ಪ್ರಯಾಣಿಕರು ನಗ್ನವಾಗಿ ಸಮುದ್ರತೀರದಲ್ಲಿ ವಿಶ್ರಾಂತಿ ಪಡೆಯಬಹುದು.

ಕೆಲವು ನಿಯಮಗಳಿವೆ

ಲೈಂಗಿಕತೆ ಎಂಬುದು ವಿವಸ್ತ್ರಗೊಳ್ಳುವ ಸ್ಥಿತಿಯಲ್ಲ, ಬದಲಾಗಿ ಅದು ಮನಸ್ಸಿನ ಸ್ಥಿತಿ ಎಂಬ ನಂಬಿಕೆಯನ್ನು ಈ ಪ್ರವಾಸ ಆಯೋಜಿಸುವ ಕಂಪನಿ ನಂಬಿದೆ. ಆದರೆ, ಮುನ್ನೆಚ್ಚರಿಕಾ ಕ್ರಮವಾಗಿ ಈ ಪ್ರವಾಸದ ಸಮಯದಲ್ಲಿ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಈ ಹಡಗು ಸಮುದ್ರದಲ್ಲಿರುವಾಗ ಅಥವಾ ಬಂದರಿನಿಂದ ದೂರದಲ್ಲಿ ಲಂಗರು ಹಾಕಿದಾಗ, ಪ್ರಯಾಣಿಕರು ಬಟ್ಟೆ ಧರಿಸದೆ ಇರಬಹುದು. ಆದರೆ, ಊಟದ ಕೊಠಡಿಗಳಲ್ಲಿ (ಪೂಲ್‌ಸೈಡ್ ಬಫೆ ಹೊರತುಪಡಿಸಿ), ಬಂದರಿನಲ್ಲಿ ಅಥವಾ ಬಂದರು ಅಧಿಕಾರಿಗಳು ಹಡಗಿನಲ್ಲಿರುವಾಗ ಬಟ್ಟೆ ಧರಿಸುವುದು ಕಡ್ಡಾಯ. ಅನುಮತಿಯಿಲ್ಲದೆ ಫೋಟೋ ತೆಗೆಯುವುದು ನಿಷಿದ್ಧ.

ಹಡಗಿನಲ್ಲಿರುವ ಸೌಕರ್ಯಗಳು

ಅಂದಹಾಗೆ, ಈ ಐಷರಾಮಿ ಹಡಗಿನಲ್ಲಿ 16 ರೆಸ್ಟೋರೆಂಟ್‌ಗಳು (ಫ್ರೆಂಚ್, ಇಟಾಲಿಯನ್, ಬ್ರೆಜಿಲಿಯನ್, ಏಷಿಯನ್ ಖಾದ್ಯಗಳು), 14 ಬಾರ್‌ಗಳು, ಕ್ಯಾಸಿನೊ, ಸ್ಪಾ, ಬೌಲಿಂಗ್ ಅಲೆ, ಮತ್ತು ಡ್ಯೂಟಿ-ಫ್ರೀ ಬುಟಿಕ್‌ಗಳಿವೆ. ಅಲ್ಲದೆ, ಸ್ಟಾರ್‌ಬಕ್ಸ್ ಕೂಡ ಲಭ್ಯವಿದೆ. 2,300 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯವಿದೆ. ಇಲ್ಲಿನ ಹೋಟೆಲ್​ಗಳು ದಿನದ 24 ಗಂಟೆಯೂ ತೆರೆದಿರುತ್ತವೆ. ನಗ್ನತೆಗೆ ವಿರಾಮ ಬೇಕು ಎನಿಸಿದಾಗ, ಹಾಟ್-ಸ್ಟೋನ್ ಮಸಾಜ್‌ಗಳನ್ನು ಹೊಂದಿರುವ ಮಂದಾರ ಸ್ಪಾ, ಸುಂಕ ರಹಿತ ಶಾಪಿಂಗ್‌ಗಾಗಿ ಡಿಸೈನರ್ ಬೂಟೀಕ್‌ಗಳು ಮತ್ತು ಮದ್ಯಪಾನಕ್ಕಾಗಿ ಲಾಂಜ್‌ಗಳ ಸೌಲಭ್ಯ ಕೂಡ ಇದರಲ್ಲಿದೆ.

ಏನೆಲ್ಲ ಕಾರ್ಯಕ್ರಮಗಳು ನಡೆಯುತ್ತವೆ?

ಈ ಹಡಗಿನಲ್ಲಿ ಥೀಮ್ ನೈಟ್‌ಗಳು (ಉದಾಹರಣೆಗೆ, ಗ್ಯಾಲಕ್ಸಿ ಥೀಮ್, ಲೈಟ್ ಅಪ್ ದಿ ನೈಟ್), ವರ್ಕ್‌ಶಾಪ್‌ಗಳು, ವಾಲಿಬಾಲ್ ಟೂರ್ನಮೆಂಟ್‌ಗಳು ಮತ್ತು ಪ್ರತಿಭಾ ಪ್ರದರ್ಶನಗಳಂತಹ ಕಾರ್ಯಕ್ರಮಗಳಿವೆ.

ಟಿಕೆಟ್ ಬೆಲೆ ಎಷ್ಟು?

ಒಳಗಿನ ಕ್ಯಾಬಿನ್‌ಗೆ $2,000 (1.68 ಲಕ್ಷ ರೂ.) ರಿಂದ ಆರಂಭವಾಗಿ, ಮೂರು-ಮಲಗುವ ಕೊಠಡಿಯ ಗಾರ್ಡನ್ ವಿಲ್ಲಾಕ್ಕೆ $33,000 (27.72 ಲಕ್ಷ ರೂ.) ವರೆಗೆ ಇರುತ್ತದೆ. ಇದು ದುಬಾರಿ ಎನಿಸಿದರೂ 11 ದಿನಗಳ ಸೂರ್ಯ, ಸಮುದ್ರ, ರುಚಿಕರವಾದ ಆಹಾರ ಮತ್ತು ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಸಿಗುವ ಅವಕಾಶಕ್ಕಾಗಿ ಪ್ರತಿ ವರ್ಷ ಬುಕ್ಕಿಂಗ್​ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಗಮನಾರ್ಹ ಸಂಗತಿ ಏನೆಂದರೆ, ಪುನರಾವರ್ತಿತ ಪ್ರವಾಸಿಗರು ಕೂಡ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.

ಅಂದಹಾಗೆ, ಈ ಕ್ರೂಸ್ ಲೈಂಗಿಕ ಸ್ವರೂಪದ್ದಲ್ಲ, ಸ್ವಿಂಗರ್‌ಗಳ ಈವೆಂಟ್ ಅಲ್ಲ. ಇದು ನಗ್ನತೆಯನ್ನು ಒಪ್ಪಿಕೊಳ್ಳುವ (naturist) ಜೀವನಶೈಲಿಯನ್ನು ಆಚರಿಸುವ ಉದ್ದೇಶವನ್ನು ಮಾತ್ರ ಹೊಂದಿದೆ. ಸಾರ್ವಜನಿಕವಾಗಿ ಕುಳಿತಾಗ ಟವೆಲ್ ಅಥವಾ ಬಟ್ಟೆಯನ್ನು ಬಳಸಲೇಬೇಕು. ಈ ಪ್ರವಾಸದಲ್ಲಿ 21 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಅವಕಾಶವಿದೆ. ಒಂದು ವೇಳೆ ನಿಯಮಗಳನ್ನು ಮೀರಿದರೆ, ಯಾವುದೇ ಹಣಕಾಸು ಮರುಪಾವತಿಯಿಲ್ಲದೆ ಹಡಗಿನಿಂದ ಇಳಿಸಲಾಗುವುದು.

ಇನ್ನು ಈ ಕ್ರೂಸ್ 1990ರಿಂದ ಬೇರ್ ನೆಸೆಸಿಟೀಸ್ ಆಯೋಜಿಸುತ್ತಿದ್ದು, 70% ಕ್ಕಿಂತ ಹೆಚ್ಚು ಪ್ರಯಾಣಿಕರು ಪುನರಾವರ್ತಿತ ಗ್ರಾಹಕರಾಗಿದ್ದಾರೆ, ಇದು ಸೌಹಾರ್ದ ವಾತಾವರಣವನ್ನು ಸೃಷ್ಟಿಸುತ್ತದೆ. ಗ್ರೇಟ್ ಸ್ಟಿರಪ್ ಕೇಯ್‌ನಲ್ಲಿ ನಗ್ನ ಸಮುದ್ರತೀರದ ಭೇಟಿಗಳು, ಸ್ನಾರ್ಕೆಲಿಂಗ್, ಕಯಾಕಿಂಗ್ ಮತ್ತು ಜಿಪ್‌ಲೈನ್‌ನಂತಹ ಚಟುವಟಿಕೆಗಳು ಕೂಡ ಪ್ರವಾಸದ ಸಂದರ್ಭದಲ್ಲಿ ಇರುತ್ತದೆ. ಇದು ಸಾಮಾನ್ಯ ಕ್ರೂಸ್‌ನಂತೆ ಐಷಾರಾಮಿ ಸೌಕರ್ಯಗಳನ್ನು ಒದಗಿಸುತ್ತದೆ. ಆದರೆ, ಇಲ್ಲಿ ನಗ್ನತೆಗೆ ಹೆಚ್ಚಿನ ಆಯ್ಕೆಯಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net