ಕೇವಲ ನಾಯಿಗಳಿಂದ ಮಾತ್ರವಲ್ಲ... ಇವುಗಳಲ್ಲಿ ಯಾವುದೇ ಪ್ರಾಣಿಗಳು ಕಚ್ಚಿದರೂ ರೇಬೀಸ್ ಬರಬಹುದು! Rabies Virus

Rabies Virus
Published on

Rabies Virus : ನಾಯಿ ಕಚ್ಚಿದರೆ ಮಾತ್ರ ನಮಗೆ 'ರೇಬೀಸ್' ಬರುತ್ತದೆ ಎಂದು ನಾವು ಸಾಮಾನ್ಯವಾಗಿ ಭಾವಿಸುತ್ತೇವೆ. ಆದರೆ ಅದು ನಿಜವಲ್ಲ. ನಾಯಿಗಳನ್ನು ಹೊರತುಪಡಿಸಿ ಇತರ ಪ್ರಾಣಿಗಳು ಕಚ್ಚಿದರೂ ರೇಬೀಸ್ ಬರುವ ಅಪಾಯವಿದೆ.

ರೇಬೀಸ್ ಒಂದು ಅಪಾಯಕಾರಿ ವೈರಲ್ ಕಾಯಿಲೆ. ಇದು ಸಾಮಾನ್ಯವಾಗಿ ಪ್ರಾಣಿಗಳ ಕಡಿತದ ಮೂಲಕ ಮನುಷ್ಯರಿಗೆ ಹರಡುತ್ತದೆ. ಈ ರೋಗವು ಮೆದುಳು ಮತ್ತು ನರಮಂಡಲದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡದಿದ್ದರೆ, ಅದು ಮಾರಕವಾಗಬಹುದು. ರೇಬೀಸ್ ಬರುವವರಲ್ಲಿ ಹೆಚ್ಚಿನವರು ನಾಯಿ ಕಚ್ಚಿದವರೇ ಆಗಿರುತ್ತಾರೆ. ಅದಕ್ಕಾಗಿಯೇ ನಾವು ಬೀದಿ ಮತ್ತು ಸಾಕು ನಾಯಿಗಳ ಬಗ್ಗೆ ಬಹಳ ಜಾಗರೂಕರಾಗಿರಬೇಕು. ನಾಯಿ ಕಚ್ಚಿದ ತಕ್ಷಣ ಲಸಿಕೆಗಳನ್ನು ಹಾಕಬೇಕು.

ರೇಬೀಸ್ ಕಾಯಿಲೆ ನಾಯಿ ಕಡಿತದಿಂದ ಮಾತ್ರ ಬರುವುದಿಲ್ಲ. ಈ ಕಾಯಿಲೆ ಇತರ ಪ್ರಾಣಿಗಳಿಂದಲೂ ಕೂಡ ಹರಡಬಹುದು. ರೇಬೀಸ್‌ಗೆ ಕಾರಣವಾಗುವಂತಹ 10 ಪ್ರಾಣಿಗಳಿವೆ. ಈ ಬಗ್ಗೆ ನೀವು ಮುಖ್ಯವಾಗಿ ತಿಳಿದುಕೊಳ್ಳಲೇಬೇಕಿದೆ. ಹಾಗಾಗಿ, ಆ ಪ್ರಾಣಿಗಳು ಯಾವುವು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ಕಾಡು ಅಥವಾ ಬೀದಿ ಬೆಕ್ಕುಗಳು ಕೂಡ ರೇಬೀಸ್ ವೈರಸ್ ಹೊಂದಿರಬಹುದು. ಈ ರೋಗವು ಅವುಗಳ ಕಡಿತ ಅಥವಾ ಗೀರುಗಳ ಮೂಲಕ ಹರಡಬಹುದು. ರೇಬೀಸ್ ವೈರಸ್ ಅನ್ನು ಹರಡುವ ಪ್ರಮುಖ ಪ್ರಾಣಿಗಳಲ್ಲಿ ಬಾವಲಿಗಳು ಕೂಡ ಸೇರಿವೆ. ತೋಳಗಳು ಕೂಡ ರೇಬೀಸ್ ವೈರಸ್ ಅನ್ನು ಸಹ ಹರಡಬಹುದು. ಈ ರೋಗವು ತೋಳಗಳ ಕಡಿತ ಅಥವಾ ಗೀರುಗಳ ಮೂಲಕ ಮನುಷ್ಯರಿಗೆ ಹರಡಬಹುದು.

ಇಲಿಗಳು ಸಾಮಾನ್ಯವಾಗಿ ರೇಬೀಸ್ ಅನ್ನು ಹರಡುತ್ತವೆ ಎಂದು ಭಾವಿಸದಿದ್ದರೂ, ಕೆಲವು ಸಂದರ್ಭಗಳಲ್ಲಿ ರೋಗವು ಅವುಗಳ ಕಡಿತದ ಮೂಲಕ ಹರಡಬಹುದು. ವಿಶೇಷವಾಗಿ ಕಾಡು ಇಲಿಗಳಿಂದ ರೇಬೀಸ್​ ಬರಬಹುದು.

ಕಾಡು ಹಂದಿಗಳು ಕೂಡ ರೇಬೀಸ್ ವೈರಸ್ ಅನ್ನು ಹರಡಬಹುದು. ಇವು ಸಾಮಾನ್ಯವಾಗಿ ಉತ್ತರ ಅಮೆರಿಕದಲ್ಲಿ ಕಂಡುಬರುತ್ತವೆ. ಕಾಡು ಹಂದಿಗಳ ಕಡಿತವು ತುಂಬಾ ಅಪಾಯಕಾರಿ.

ಉಳಿದಂತೆ, ಮಂಗುಸಿ, ರ‍್ಯಾಕೂನ್, ನರಿ ಹಾಗೂ ಸ್ಕಂಕ್ ಪ್ರಾಣಿಗಳಿಂದಲೂ ಮಾರಕ ರೇಬೀಸ್​ ಹರಡಬಲ್ಲದು. ರೇಬೀಸ್‌ ಸಾಮಾನ್ಯವಾಗಿ ಕಡಿತದ ಮೂಲಕ ಹರಡುತ್ತದೆ ಮತ್ತು ಈ ಪ್ರಾಣಿಗಳು ವೈರಸ್‌ನ ವಾಹಕಗಳಾಗಿರಬಹುದು, ವಿಶೇಷವಾಗಿ ಕಾಡು ಪ್ರಾಣಿಗಳು.

ರೇಬೀಸ್​ ತಡೆಗಟ್ಟುವುದು ಹೇಗೆ?

ರೇಬೀಸ್ ತಡೆಗಟ್ಟಲು ಸಾಕುಪ್ರಾಣಿಗಳಿಗೆ ರೇಬೀಸ್ ವಿರುದ್ಧ ಲಸಿಕೆ ಹಾಕುವುದು ಬಹಳ ಮುಖ್ಯ. ಯಾವುದೇ ಪ್ರಾಣಿ ನಿಮ್ಮನ್ನು ಕಚ್ಚಿದ ತಕ್ಷಣ, ಗಾಯವನ್ನು ಸೋಪಿನಿಂದ ಸ್ವಚ್ಛಗೊಳಿಸಿ ಮತ್ತು ವೈದ್ಯಕೀಯ ಸಲಹೆ ಪಡೆಯಿರಿ. ಸಮಯಕ್ಕೆ ಸರಿಯಾಗಿ ರೇಬೀಸ್ ಲಸಿಕೆ ಮತ್ತು ಇಮ್ಯುನೊಗ್ಲಾಬ್ಯುಲಿನ್ ಇಂಜೆಕ್ಷನ್‌ಗಳನ್ನು ತೆಗೆದುಕೊಳ್ಳುವ ಮೂಲಕ ರೋಗವನ್ನು ತಡೆಗಟ್ಟಬಹುದು. ಆದ್ದರಿಂದ ಯಾವುದೇ ಪ್ರಾಣಿಯಿಂದ ಕಚ್ಚಲ್ಪಟ್ಟರೆ ತಕ್ಷಣ ವೈದ್ಯರನ್ನು ಭೇಟಿ ಮಾಡುವುದು ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net