‘ಆರ್‌ಆರ್‌ಆರ್’ ಪೋಸ್ಟ್‌ಪೋನ್ ಆಗಿದ್ದರಿಂದ ಎಂಟ್ರಿ ಕೊಡ್ತಿದ್ದಾರಾ ರಜನಿಕಾಂತ್?

RRR - Rajanikanth Final
Published on

ರಾಜಮೌಳಿ ನಿರ್ದೇಶನದ ಜ್ಯೂನಿಯರ್ ಎನ್.ಟಿ.ಆರ್ ಮತ್ತು ರಾಮ್‌ಚರಣ್ ತೇಜ ಅಭಿನಯದ ‘ಆರ್‌ಆರ್‌ಆರ್’ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದೆಯಾ? ಅಂಥದ್ದೊಂದು ಅನುಮಾನ ಇದೀಗ ಎಲ್ಲರನ್ನೂ ಕಾಡುತ್ತಿದೆ. ಈ ಅನುಮಾನಕ್ಕೆ ಕಾರಣ, ರಜನಿಕಾಂತ್ ಅಭಿನಯದ ‘ಅಣ್ಣಾತ್ತೆ’ ಮುಂದಿನ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗುತ್ತಿರುವುದು.

ಸಂಕ್ರಾಂತಿ ಹಬ್ಬಕ್ಕೆ ‘ಅಣ್ಣತ್ತೆ’ ಚಿತ್ರ ಬಿಡುಗಡೆಯಾಗುತ್ತಿರುವುದಕ್ಕೂ, ‘ಆರ್‌ಆರ್‌ಆರ್’ ಮುಂದಕ್ಕೆ ಹೋಗುತ್ತಿರುವುದಕ್ಕೂ ಎಲ್ಲಿಂದೆಲ್ಲಿ ಸಂಬಂಧ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಟ್ವಿಸ್ಟ್ ಇರೋದೇ ಇಲ್ಲಿ. ಇದಕ್ಕೂ ಮುನ್ನ, ‘ಅಣ್ಣಾತ್ತೆ’ ಚಿತ್ರವನ್ನು ದೀಪಾವಳಿ ಹಬ್ಬಕ್ಕೆ ಬಿಡುಗಡೆ ಮಾಡುವುದಕ್ಕೆ ಪ್ಲಾನ್ ಆಗಿತ್ತು. ಆದರೆ, ಇದೀಗ ಚಿತ್ರವನ್ನು ಸಂಕ್ರಾಂತಿಗೆ ಬಿಡುಗಡೆ ಮಾಡುವುದಾಗಿ ಸನ್ ಪಿಕ್ಚರ್ಸ್ ಸಂಸ್ಥೆಯು ತೀರ್ಮಾನ ಮಾಡಿದೆ. ಅಷ್ಟೇ ಅಲ್ಲ, ಈ ಕುರಿತು ಅಧಿಕೃತ ಘೋಷಣೆಯನ್ನೂ ಹೊರಡಿಸಿದೆ.

ಒಂದು ಪಕ್ಷ ‘ಆರ್‌ಆರ್‌ಆರ್’, ಸಂಕ್ರಾಂತಿಗೆ ಬಿಡುಗಡೆಯಾಗುತ್ತಿದ್ದರೆ, ‘ಅಣ್ಣಾತ್ತೆ’ ಸಹ ಬಿಡುಗಡೆಯಾಗುತಿತ್ತಾ? ‘ನೋ ವೇ ... ಚಾನ್ಸೇ ಇಲ್ಲ ...’ ಎಂಬ ಉತ್ತರ ಸಿನಿಮಾ ಪಂಡಿತರಿಂದ ಬರುತ್ತದೆ. ಹೇಳಿ ಕೇಳಿ ‘ಆರ್‌ಆರ್‌ಆರ್’ ಭಾರತದ ಹೈ ಬಜೆಟ್ ಸಿನಿಮಾ ಎಂಬ ಖ್ಯಾತಿಗೆ ಒಳಗಾಗಿರುವ ಸಿನಿಮಾ. ಈ ಸಿನಿಮಾ ಜತೆ ಬಿಡುಗಡೆಯಾಗುವುದಕ್ಕೆ ಸಹಜವಾಗಿಯೇ ಎಲ್ಲರಿಗೂ ಭಯವಿರುತ್ತದೆ. ಜತೆಯಾಗಿ ಬಿಡುಗಡೆಯಾಗುವುದಿರಲಿ, ‘ಆರ್‌ಆರ್‌ಆರ್’ ಬಿಡುಗಡೆಯ ಸುತ್ತಮುತ್ತ, ಬೇರೆ ಯಾವುದೇ ಸಿನಿಮಾ ಬಿಡುಗಡೆ ಆಗುವುದೇ ಸಂಶಯ. ಹೀಗಿರುವಾಗ, ‘ಅಣ್ಣಾತ್ತೆ’ ಬಿಡುಗಡೆಯಾಗುತ್ತಿದೆ ಎಂದರೆ, ‘ಆರ್‌ಆರ್‌ಆರ್’ ಮುಂದಕ್ಕೆ ಹೋಗಿದೆ ಎಂಬುದೇ ಎಲ್ಲರ ಲೆಕ್ಕಾಚಾರ.

‘ಆರ್‌ಆರ್‌ಆರ್’ ಮುಂದಕ್ಕೆ ಹೋಗಿರುವುದೇ, ಬೇರೆ ಸಿನಿಮಾಗಳು ಅದೇ ದಿನ ಬಿಡುಗಡೆಯಾಗುವುದಕ್ಕೆ ಪೈಪೋಟಿ ನಡೆಸುತ್ತಿರುವುದು ಕಾರಣವಂತೆ. ಆದರೆ, ‘ಆರ್‌ಆರ್‌ಆರ್’ ಚಿತ್ರತಂಡದವರು ಮಾತ್ರ ಎಲ್ಲೂ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದೆ ಎಂದು ಹೇಳಿಕೊಂಡಿಲ್ಲ. ಈಗಲೇ ಹೇಳಿಬಿಟ್ಟರೆ, ಬೇರೆ ತೆಲುಗು ಸಿನಿಮಾಗಳು ಅದೇ ದಿನ ಬರುವುದಕ್ಕೆ ಪೈಪೋಟಿ ನಡೆಸಬಹುದು ಎಂಬ ಕಾರಣಕ್ಕೋ ಏನೋ, ಬಿಡುಗಡೆಯ ಬಗ್ಗೆ ಮಾತನಾಡುತ್ತಲೇ ಇಲ್ಲ. ಆದರೆ, ಅಂಥದ್ದೊಂದು ಹಿಂಟ್ ಸಿಕ್ಕಿರುವುದರಿಂದಲೇ ‘ಅಣ್ಣಾತ್ತೆ’ ಚಿತ್ರತಂಡದವರು ಮೊದಲಿಗೆ ಮುಂದೆ ಬಂದು, ಸಂಕ್ರಾಂತಿಗೆ ಚಿತ್ರ ಬಿಡುಗಡೆ ಮಾಡುತ್ತಿರುವುದಾಗಿ ಘೋಷಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net