‘ಬಾಹುಬಲಿ’ ಜತೆಗೆ ಭಾಗ್ಯಶ್ರೀ ... ಮತ್ತೆ ಬಂದ ‘ಮೈನೇ ಪ್ಯಾರ್ ಕಿಯಾ’ ಚೆಲುವೆ

Bhagyasri - Prabhas Final
Published on

ಆ ಕಡೆ ಚಿತ್ರರಂಗದಿಂದ ದೂರವೂ ಇರಲಿಲ್ಲ, ಈ ಕಡೆ ಸಕ್ರಿಯವಾಗಿಯೂ ಇರದಿದ್ದ ನಟಿ ಎಂದರೆ ಅದು ‘ಮೈನೇ ಪ್ಯಾರ್ ಕಿಯಾ’ ಖ್ಯಾತಿಯ ಭಾಗ್ಯಶ್ರೀ. 31 ವರ್ಷಗಳ ಹಿಂದೆ ಬಿಡುಗಡೆಯಾದ ಆ ಚಿತ್ರ ಸೂಪರ್ ಹಿಟ್ ಆಗಿದ್ದೋ ಆಗಿದ್ದು, ಬಾಲಿವುಡ್‌ನಲ್ಲಿ ಭಾಗ್ಯಶ್ರೀ ಬೇಡಿಕೆಯ ನಟಿಯಾದರು. ಆದರೆ, ಬಂದ ಚಿತ್ರಗಳನ್ನೆಲ್ಲಾ ಅವರು ಒಪ್ಪಿಕೊಳ್ಳಲಿಲ್ಲ. ಆಗಾಗ ಒಂದೊಂದು ಚಿತ್ರದಲ್ಲೋ, ಧಾರಾವಾಹಿಯಲ್ಲಿ ನಟಿಸುತ್ತಾ, ಇನ್ನೊಂದು ಕಡೆ ಸಾಂಸಾರಿಕ ಜೀವಕ್ಕೂ ಟೈಮ್ ಕೊಡುತ್ತಲೇ ಬಂದಿದ್ದಾರೆ. ಈಗ ಬಹಳ ದಿನಗಳ ನಂತರ ಭಾಗ್ಯಶ್ರೀ ಮತ್ತೆ ವಾಪಸ್ಸು ಬಂದಿದ್ದಾರೆ.

ಈ ಬಾರಿ ಅವರು ರೀಎಂಟ್ರಿ ಕೊಟ್ಟಿರುವುದು ಯಾರ ಚಿತ್ರದಿಂದ ಗೊತ್ತಾ? ಪ್ರಭಾಸ್ ಅಭಿನಯದ ಚಿತ್ರದ ಮೂಲಕ. ಹಾಗಾದರೆ, ಪ್ರಭಾಸ್‌ಗೆ ನಾಯಕಿಯಾಗಿ ಭಾಗ್ಯಶ್ರೀ ನಟಿಸುತ್ತಾರಾ ಎಂದು ಕೇಳಿಬಿಟ್ಟೀರಿ ಜೋಕೆ. ಬಹುಶಃ ‘ಮೈನೇ ಪ್ಯಾರ್ ಕಿಯಾ’ ಬಿಡುಗಡೆಯಾದಾಗ, ಪ್ರಭಾಸ್ 10 ವರ್ಷದ ಹುಡುಗ. ಅವರ ಜತೆಗೆ ಹೇಗೆ ನಾಯಕಿಯಾಗುವುದಕ್ಕೆ ಸಾಧ್ಯ? ಸಾಧ್ಯವೇ ಇಲ್ಲ. ಪ್ರಭಾಸ್ ಅಕ್ಕನಾಗಿಯೋ, ಅಮ್ಮನಾಗಿಯೋ ಭಾಗ್ಯಶ್ರೀ ನಟಿಸುತ್ತಿದ್ದಾರೆ. ಪಾತ್ರ ಯಾವುದೇ ಇರಲಿ, ಪ್ರಭಾಸ್ ಚಿತ್ರದ ಮೂಲಕ ಭಾಗ್ಯಶ್ರೀ ರೀಎಂಟ್ರಿ ಕೊಡುತ್ತಿರುವುದಂತೂ ನಿಜ.

ಈ ಕುರಿತು ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಪ್ರಭಾಸ್ ಅಭಿನಯದ ತೆಲುಗು ಚಿತ್ರದಲ್ಲಿ ನಟಿಸುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ‘ಕಳೆದ ಕೆಲವು ವರ್ಷಗಳಲ್ಲಿ ಹಲವು ಕಥೆಗಳನ್ನು ಕೇಳಿದ್ದೆ. ಈ ಪೈಕಿ ಪ್ರಭಾಸ್ ಅಭಿನಯದ ಚಿತ್ರದಲ್ಲಿ ನಟಿಸುತ್ತಿದ್ದೀನಿ. ಚಿತ್ರದ ಚಿತ್ರೀಕರಣ ಈಗಾಗಲೇ ಲಾಕ್‌ಡೌನ್‌ಗಿಂತ ಮುನ್ನವೇ ಶುರುವಾಗಿದೆ. ಆದರೆ, ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ. ಅದೊಂದು ಅದ್ಭುತವಾದ ಪಾತ್ರ’ ಎಂದು ಹೇಳಿಕೊಂಡಿದ್ದಾರೆ ಭಾಗ್ಯಶ್ರೀ.

ಈ ಮಧ್ಯೆ, ಭಾಗ್ಯಶ್ರೀ ಅವರ ಮಗ ಅಭಿಮನ್ಯು ದಾಸಾನಿ ಕಳೆದ ವರ್ಷ ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅಭಿಮನ್ಯು ಅಭಿನಯದ ಮೊದಲ ಚಿತ್ರ ‘ಮರ್ದ್ ಕೋ ದರ್ದ್ ನಹೀ ಹೋತಾ’ ಕಳೆದ ವರ್ಷವಷ್ಟೇ ಬಿಡುಗಡೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net