

ಮುಂಬೈ: ಲಾಕ್ಡೌನ್ 4.0 ಅವಧಿಯಲ್ಲಿ ಕೂಡ ಮಾಲ್ ಮತ್ತು ಚಿತ್ರಮಂದಿರಗಳು ಪುನರಾರಂಭವಾಗುವುದು ಅನುಮಾನವಾಗಿರುವ ಹಿನ್ನೆಲೆಯಲ್ಲಿ ಚಿತ್ರ ನಿರ್ಮಾಪಕರು ಸಿದ್ಧವಾಗಿರುವ ತಮ್ಮ ಚಿತ್ರಗಳನ್ನು ಅಮೆಜಾನ್ ಪ್ರೈಮ್, ನೆಟ್ಫ್ಲಿಕ್ಸ್ನಂಥ ಓವರ್ ದ ಟಾಪ್ ಮೀಡಿಯಾ ಸರ್ವಿಸ್ (ಒಟಿಟಿ) ಪ್ಲಾಟ್ಫಾರಂಗಳಲ್ಲಿ ಬಿಡುಗಡೆ ಮಾಡಲು ಮುಂದಾಗುತ್ತಿದ್ದಾರೆ.
ಅದರಂತೆ ಬಾಲಿವುಡ್ನ ದಿಗ್ಗಜ ನಟ ಅಮಿತಾಭ್ ಬಚ್ಚನ್ ಮತ್ತು ಆಯುಷ್ಮಾನ್ ಖುರಾನಾ ನಟನೆಯ ಗುಲಾಬೋ ಸಿತಾಬೋ ಚಿತ್ರ ಕೂಡ ಒಟಿಟಿ ಅಮೆಜಾನ್ ಪ್ರೈಮ್ನಲ್ಲಿ ಜೂ.12ರಂದು ಬಿಡುಗಡೆಯಾಗಲಿದೆ. ಇದನ್ನು 200 ರಾಷ್ಟ್ರಗಳಲ್ಲಿ ಏಕಕಾಲಕ್ಕೆ ಎಲ್ಲರೂ ಈ ಚಿತ್ರವನ್ನು ತಮ್ಮ ಕುಟುಂಬದವರ ಜತೆ ಮನೆಯಲ್ಲೇ ನೋಡಬಹುದಾಗಿದೆ.
ಕೋವಿಡ್ 19 ಕಾಟವಿಲ್ಲದೆ ಎಲ್ಲವೂ ಸರಿಯಾಗಿದ್ದರೆ ಶೂಜಿತ್ ಸರ್ಕಾರ್ ನಿರ್ದೇಶನದ ಗುಲಾಬೋ ಸಿತಾಬೋ ಚಿತ್ರ ಏಪ್ರಿಲ್ 17ರಂದು ಜಾಗತಿಕವಾಗಿ ಬೆಳ್ಳಿತೆರೆಗಳ ಮೇಲೆ ಅಪ್ಪಳಿಸಬೇಕಿತ್ತು. ಆದರೆ, ಕೋವಿಡ್ 19 ಲಾಕ್ಡೌನ್ ಹಿನ್ನೆಲೆಯಲ್ಲಿ ಚಿತ್ರಮಂದಿರಗಳು, ಮಾಲ್ಗಳು ಮುಚ್ಚಲ್ಪಟ್ಟಿರುವುದರಿಂದ ಈ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿತ್ತು.
ಆಯುಷ್ಮಾನ್ ಖುರಾನಾ ಮತ್ತು ಅಮಿತಾಭ್ ಬಚ್ಚನ್ ಜನರನ್ನು ತಮ್ಮೆಡೆಗೆ ಸೆಳೆಯುವ ಜತೆಗೆ ಪರಸ್ಪರ ಮೇಲುಗೈ ಸಾಧಿಸಲು ಪೈಪೋಟಿ ನಡೆಸುವುದು ಈ ಚಿತ್ರದ ಕಥಾಹಂದರವಾಗಿದೆ.
ಇದನ್ನೂ ಓದಿ: ನಿಯಮಿತ ರೈಲು ಸಂಚಾರ ಜೂನ್ 30ವರೆಗೂ ಆರಂಭವಾಗಲ್ಲ
ಒಟಿಟಿಗಳಲ್ಲಿ ಚಿತ್ರಗಳ ಬಿಡುಗಡೆ ಭಾರತೀಯ ಚಿತ್ರರಂಗದಲ್ಲಿ ಹೊಸ ಬೆಳವಣಿಗೆಗೆ ನಾಂದಿ ಹಾಡಲಿದೆ. ಜಾಗತಿಕವಾಗಿ ಚಿತ್ರಪ್ರೇಮಿಗಳು ತಮಾಷೆಯ ಕಥಾವಸ್ತುವನ್ನು ಹೊಂದಿರುವ ನಮ್ಮ ಸಿನಿಮಾವನ್ನು ಮನೆಯಲ್ಲೇ ಕುಳಿತು ನೋಡುವಂತೆ ಆಗಲಿರುವುದು ಸಂತಸಕ್ಕೆ ಕಾರಣವಾಗಿದೆ. ಅಮಿತಾಭ್ ಬಚ್ಚನ್ರಂಥ ದಿಗ್ಗಜ ನಟ, ಆಯುಷ್ಮಾನ್ ಖುರಾನಾರಂಥ ಉದಯೋನ್ಮುಖ ನಟರನ್ನು ನಿರ್ದೇಶಿಸಲು ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯವೇ ಸರಿ ಎಂದು ಚಿತ್ರದ ನಿರ್ದೇಶಕ ಶೂಜಿತ್ ಸರ್ಕಾರ್ ಹೇಳಿದ್ದಾರೆ.