ಕರೊನಾ ಯಾವಾಗ ನಿಯಂತ್ರಣಕ್ಕೆ ಬರಬಹುದೆಂದು ಊಹಿಸೋಕೆ ಸಾಧ್ಯವೇ ಇಲ್ಲ ಎಂದ ಡಬ್ಲ್ಯುಎಚ್​ಒ

WHO
Published on

ಜಿನೇವಾ: ಜಗತ್ತನ್ನೇ ತಲ್ಲಣಗೊಳಿಸಿರುವ ಕೋವಿಡ್​ 19 ವೈರಸ್​ನ ಸೋಂಕು ಯಾವಾಗ ನಿಯಂತ್ರಣಕ್ಕೆ ಬರಬಹುದು ಎಂದು ಅಂದಾಜಿಸುವುದು ಸಾಧ್ಯವೇ ಇಲ್ಲ. ಈ ಹೊಸ ಕರೊನಾ ವೈರಸ್​ ಬಹುಶಃ ಇಲ್ಲೇ ಇರುವುದಕ್ಕೇ ಬಂದಂತಿದೆ. ಇದೊಂದು ವೇಳೆ ದೂರ ಹೋಗದೇ ಇರಬಹುದು ಎಂದು ವರ್ಲ್ಡ್​ ಹೆಲ್ತ್ ಆರ್ಗನೈಸೇಷನ್​ (ಡಬ್ಲ್ಯುಎಚ್​ಒ)ನ ತುರ್ತುಪರಿಸ್ಥಿತಿಗಳ ಮುಖ್ಯಸ್ಥ ಡಾ. ಮೈಕೆಲ್​ ರಿಯಾನ್ ಹೇಳಿದ್ದಾರೆ.

ಈ ವೈರಸ್ ಬಹುಶಃ ನಮ್ಮ ಸಮುದಾಯ ನಡುವೆ ಎಚ್​ಐವಿ ಮುಂತಾದ ಮತ್ತೊಂದು ಸೋಂಕು ಹರಡುವ ವೈರಸ್ ಗಳಂತೆಯೇ ಒಂದು ವೈರಸ್ ಆಗಿ ಉಳಿಯಲಿದೆ. ಸರಿಯಾದ ಔಷಧ ಇಲ್ಲದೇ ಹೋದರೂ ಈ ವೈರಸ್​ ಸೋಂಕಿಗೆ ಒಳಗಾದವರ ಸಂಖ್ಯೆ ಇದುವರೆಗೆ ಬಹಳ ಕಡಿಮೆ ಇದೆ. ಈ ವೈರಸ್​ನ ಪರಿಣಾಮವನ್ನು ಎದುರಿಸಿ ಸಶಕ್ತವಾಗಿ ಜೀವನ ಸಾಗಿಸುವುದಕ್ಕೆ ಮನುಷ್ಯರಲ್ಲಿ ರೋಗ ಪ್ರತಿರೋಧ ಶಕ್ತಿ ಅಭಿವೃದ್ಧಿಯಾಗುವುದಕ್ಕೆ ಕೆಲವು ವರ್ಷಗಳೇ ಬೇಕಾದೀತು. ಈ ಬಗ್ಗೆ ಗಮನಹರಿಸುವುದು ಸದ್ಯದ ತುರ್ತು ಅಗತ್ಯ ಎಂದು ನನಗೆ ಅನ್ನಿಸುತ್ತಿದೆ. ಇದಕ್ಕೆ ಪರಿಣಾಮಕಾರಿಯಾದ ಲಸಿಕೆ ಅಭಿವೃದ್ಧಿ ಪಡಿಸಿ ಅದನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಬೇಕಾದ ಅವಶ್ಯಕತೆ ಇದೆ ಎಂದು ರಿಯಾನ್ ಹೇಳಿದ್ದಾರೆ.

ಇದೇ ವೇಳೆ ಡಬ್ಲ್ಯುಎಚ್​ಒದ ಕೋವಿಡ್​ 19 ಸಂಬಂಧಿಸಿದ ಟೆಕ್ನಿಕಲ್ ಲೀಡ್ ಮರಿಯಾ ವ್ಯಾನ್ ಕೆರ್​​ಖೋವ್​ ಹೇಳುವ ಪ್ರಕಾರ, ಇದನ್ನು ನಿಯಂತ್ರಿಸುವುದು ನಾವು ಅನುಸರಿಸುವ ಜೀವನಶೈಲಿಯಲ್ಲೇ ಇದೆ. ಇದನ್ನು ನಾವು ಅನೇಕ ರಾಷ್ಟ್ರಗಳ ಜನರ ಉದಾಹರಣೆಯ ಮೂಲಕ ಗಮನಿಸಬಹುದು. ಆದರೆ, ಔಷಧ ಇಲ್ಲದೇ ಇದನ್ನು ಗುಣಪಡಿಸಲಾಗದು ಎಂದು ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net