

ಈಗಾಗಲೇ ಒಂದಷ್ಟು ಭಾಗದ ಶೂಟಿಂಗ್ ಮುಗಿಸಿಕೊಂಡಿರುವ ಆರ್ಆರ್ಆರ್ ಚಿತ್ರತಂಡ, ಇನ್ನೇನು ಮಿಕ್ಕ ಶೂಟಿಂಗ್ ಶುರುಮಾಡಿಕೊಳ್ಳಲು ಅಣಿಯಾಗಿತ್ತು. ಆದರೆ, ಲಾಕ್ಡೌನ್ ಹಿನ್ನೆಲೆಯಲ್ಲಿ ಅದು ಮುಂದೂಡುತ್ತಲೇ ಬಂದಿತು. ಇನ್ನೇನು ಶೂಟಿಂಗ್ಗೆ ಚಾಲನೆ ಸಿಕ್ಕಿತು ಎನ್ನುವಷ್ಟರಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದರ ಹಿನ್ನೆಲೆಯಲ್ಲಿ ಚಿತ್ರೀಕರಣಕ್ಕೆ ಮತ್ತೆ ವಿಳಂಬವಾಯಿತು. ಇದೀಗ ಆ ವಿಳಂಬದ ಅವಧಿ ಎಷ್ಟಾಗಲಿದೆ ಗೊತ್ತಾ?
ಹೌದು, ಲಾಕ್ಡೌನ್ ಅವಧಿಯಲ್ಲಿಯೇ ಆರ್ಆರ್ಆರ್ ಸಿನಿಮಾದ ಕೆಲಸಗಳ ಜತೆಗೆ ಮಹೇಶ್ ಬಾಬು ಜತೆಗಿನ ಸಿನಿಮಾವನ್ನೂ ಘೋಷಣೆ ಮಾಡಿದ್ದರು ರಾಜಮೌಳಿ. ಅಭಿಮಾನಿಗಳಿಗೂ ಈ ಸುದ್ದಿ ಖುಷಿಯ ಜತೆಗೆ ಕುತೂಹಲಕ್ಕೂ ಕಾರಣವಾಗಿತ್ತು. ಪೂರ್ಣ ಪ್ರಮಾಣದಲ್ಲಿ ಮಹೇಶ್ ಬಾಬು ಸಿನಿಮಾದತ್ತ ದೃಷ್ಟಿಹಾಯಿಸುತ್ತಿದ್ದಾರೆನೋ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಆವತ್ತಿನ ಮಾತು ನಿಜವಾಗಿದೆ. ಆರ್ಆರ್ಆರ್ ಸಿನಿಮಾ ಶೂಟಿಂಗ್ ಚಾಲನೆ ಬದಿಗಿಟ್ಟು, ಮಹೇಶ್ ಬಾಬು ಸಿನಿಮಾದತ್ತ ರಾಜಮೌಳಿ ಗಮನ ಹರಿಸಿದ್ದಾರೆ.
ಹಾಗಾದರೆ, ಆರ್ಆರ್ಆರ್ ಶೂಟಿಂಗ್ ಯಾವಾಗ? ಈ ಬಗ್ಗೆ ಚಿತ್ರದ ಕ್ಯಾಮರಾಮನ್ ಸೇಂಥಿಲ್ ಸುಳಿವು ನೀಡಿದ್ದು, ಅಕ್ಟೋಬರ್ ವೇಳೆಗೆ ಚಿತ್ರೀಕರಣ ಮಾಡಿಕೊಳ್ಳಲು ಯೋಜನೆ ರೂಪಿಸಲಾಗಿದೆಯಂತೆ. ಅಷ್ಟೇ ಅಲ್ಲ ಸಿನಿಮಾ ಮುಗಿಸುವ ಬಗ್ಗೆಯೂ ತಮಡದ ಮೇಲೆ ಯಾವುದೇ ಒತ್ತಡ ಇಲ್ಲವಂತೆ.
ಇನ್ನು ಸಿನಿಮಾ ಬಿಡುಗಡೆ ವಿಚಾರಕ್ಕೆ ಬಂದರೆ. 2022ರ ಸಂಕ್ರಾಂತಿಗೆ ಸಿನಿಮಾ ಬಿಡುಗಡೆ ಮಾಡುವ ಲೆಕ್ಕಾಚಾರ ಚಿತ್ರತಂಡದ್ದು. ಎಲ್ಲವೂ ಸರಿಯಾಗಿಯೇ ನಡೆದಿದ್ದರೆ, 2021ರ ಸಂಕ್ರಾಂತಿಗೆ ಸಿನಿಮಾ ಬಿಡುಗಡೆ ಆಗಬೇಕಿತ್ತು.