

'ಗಾಳಿಪಟ - 2' ಚಿತ್ರದ ಇಲ್ಲಿಯವರೆಗೂ ಆಗಿರುವ ಚಿತ್ರೀಕರಣದ ಪೋಸ್ಟ್-ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿರುವ ಯೋಗರಾಜ್ ಭಟ್, ಚಿತ್ರೀಕರಣ ಪ್ರಾರಂಭವಾಗುವುದಕ್ಕೆ ಕಾಯುತ್ತಲೇ ಇದ್ದಾರೆ.
ಈ ಮಧ್ಯೆ, ಅವರು ಇಂದು ಫೇಸ್ಬುಕ್ನಲ್ಲಿ ಒಂದು ಪೋಸ್ಟ್ ಹಾಕಿದ್ದು, ತಾವು ಯಾವುದೇ ರಾಜಕೀಯ ಪಕ್ಷವನ್ನೂ ಬೆಂಬಲಿಸುತ್ತಿಲ್ಲ ಮತ್ತು ಈ ಸಂಬಂಧ ಯಾರನ್ನಾದರೂ ಬೆಂಬಲಿಸುವ ಪೋಸ್ಟ್ಗಳಲ್ಲಿ ತಮ್ಮ ಫೋಟೋ ಕಂಡುಬಂದರೆ, ಅದನ್ನು ನಿರ್ಲಕ್ಷಿಸಬೇಕೆಂದು ಮನವಿ ಮಾಡಿದ್ದಾರೆ.
ಈ ಕುರಿತು ಬರೆದುಕೊಂಡಿರುವ ಅವರು, 'ಇತ್ತೀಚೆಗೆ ನನ್ನ ಫೋಟೋವೊಂದರ ಮೇಲೆ ಕೆಲವೊಂದು ಸಾಲುಗಳನ್ನು ಬರೆದು, ಯಾವುದೋ ಒಂದು ಪಕ್ಷಕ್ಕೆ ಬೆಂಬಲ ನೀಡಿ, ಮತ್ಯಾವುದೋ ಪಕ್ಷಕ್ಕೆ ಬೆಂಬಲ ನೀಡಬೇಡಿ ಎಂದು ಸ್ವತಃ ನಾನೇ ಜನರಲ್ಲಿ ವಿನಂತಿ ಮಾಡುತ್ತಿರುವಂತೆ ಬಿಂಬಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ' ಎಂದು ಹೇಳಿದ್ದಾರೆ.
ಈ ವಿಷಯವಾಗಿ ಇನ್ನಷ್ಟು ಮುಂದುವರೆದು ಮಾತನಾಡಿರುವ ಅವರು, 'ನನಗೆ ಅರ್ಥವಾಗುವುದು ಸಿನಿಮಾದ ಭಾಷೆ ಮಾತ್ರ, ರಾಜಕೀಯಕ್ಕೆ ಸಂಬಂಧಪಟ್ಟ ಯಾವ ಎಡ-ಬಲ ಸಿದ್ಧಾಂತಗಳೂ ನನಗೆ ತಿಳಿದಿಲ್ಲ. ಹಾಗಾಗಿ ನನ್ನ ಎಲ್ಲಾ ಗೆಳೆಯ/ಗೆಳತಿಯರು ಈ ರೀತಿಯ ಯಾವುದೇ ವೈಪರೀತ್ಯಗಳಲ್ಲಿ ನನ್ನ ಫೋಟೋ ಕಂಡುಬಂದಲ್ಲಿ ಅದನ್ನು ನಿರ್ಲಕ್ಷಿಸಬೇಕಾಗಿ ವಿನಂತಿ' ಎಂದು ತಮ್ಮ ಅಭಿಮಾನಿಗಳಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.