

ಕರೊನಾದಿಂದ ಕಳೆದ ವಾರ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದ ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತು ಅವರ ಪುತ್ರಿ ಆರಾಧ್ಯಾ, ಗುಣಮುಖರಾಗಿ ಸೋಮವಾರವಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಕುರಿತು ಐಶ್ವಯಾ ರೈ ಅವರ ಪತಿ ಅಭಿಷೇಕ್ ಬಚ್ಚನ್ ಟ್ವೀಟ್ ಮಾಡಿ, ಎಲ್ಲರ ಶುಭ ಹಾರೈಕೆಗಳೊಂದಿಗೆ ಅವರಿಬ್ಬರೂ ಗುಣಮುಖರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಈ ಕುರಿತು ಇದೀಗ ಅಮಿತಾಭ್ ಬಚ್ಚನ್ ಸಹ ಟ್ವೀಟ್ ಮಾಡಿದ್ದಾರೆ. ತಮ್ಮ ಸೊಸೆ ಮತ್ತು ಮೊಮ್ಮಗಳು ಸುರಕ್ಷಿತವಾಗಿ ಆಸ್ಪತ್ರೆಯಿಂದ ಮನೆಗೆ ಮರಳಿ ಬಂದಿರುವುದು ಖುಷಿ ತಂದಿದೆ ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲ, ಅವರು ಸರುಕ್ಷಿತವಾಗಿರುವ ವಿಷಯ ಕೇಳಿ, ಸಂತೋಷದಿಂದ ಅಳು ತಡೆಯೋಕೆ ಆಗುತ್ತಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಬರೆದಿರುವ ಅವರು, 'ನಮ್ಮ ಚೋಟಿ ಬಿಟಿಯಾ ಮತ್ತು ಬಹುರಾನಿಗೆ ಆಸ್ಪತ್ರೆಯಿಂದ ಮುಕ್ತಿ ಸಿಕ್ಕಿದೆ. ಈ ವಿಷಯ ಕೇಳಿ ಸಂತೋಷದಿಂದ ಅಳು ತಡೆಯೋಕೆ ಆಗ್ತಿಲ್ಲ. ಪ್ರಭು ನಿನ್ನ ಕೃಪೆ ಅಪಾರ' ಎಂದು ಅವರು ಟ್ವೀಟ್ ಮಾಡಿದ್ದಾರೆ.
ಸುಮಾರು ಎರಡು ವಾರಗಳ ಹಿಂದೆ, ಅಮಿತಾಭ್ ಬಚ್ಚನ್ ಮತ್ತು ಅವರ ಮಗ ಅಭಿಷೇಕ್ ಬಚ್ಚನ್ ಕೋವಿಡ್ ಪರೀಕ್ಷೆಗೆ ಒಳಗಾದಾಗ, ವರದಿ ಪಾಸಿಟಿವ್ ಬಂದು ಇಬ್ಬರೂ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಐಶ್ವರ್ಯಾ ಮತ್ತು ಆರಾಧ್ಯಾಗೆ ಟೆಸ್ಟ್ ಮಾಡಿದ್ದಾಗ, ಇಬ್ಬರಿಗೂ ಕರೊನಾ ಪಾಸಿಟಿವ್ ಪತ್ತೆಯಾಗಿತ್ತು. ಈ ಸಂಬಂಧ ಅವರಿಬ್ಬರಿಗೂ ಹೋಂ ಕ್ವಾರಂಟೈನ್ನಲ್ಲಿ ಚಿಕಿತ್ಸೆ ನೀಡಲಾಗುತಿತ್ತು.
ಹತ್ತು ದಿನಗಳ ಹಿಂದೆ ಐಶ್ವರ್ಯಾ ಮತ್ತು ಆರಾಧ್ಯಗೆ ಪರೀಕ್ಷೆ ಮಾಡಿದಾಗ, ಮತ್ತೊಮ್ಮೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರಿಬ್ಬರನ್ನೂ ನಾನಾವತಿ ಆಸ್ಪತ್ರೆಗೆ ದಾಖಲಾಗಿತ್ತು. ಈಗ ಅವರಿಬ್ಬರೂ ಸಂಪೂರ್ಣವಾಗಿ ಗುಣಮುಖರಾಗಿರುವ ಕಾರಣ, ಇಬ್ಬರನ್ನೂ ಡಿಸ್ಚಾರ್ಜ್ ಮಾಡಲಾಗಿದೆ. ಆದರೆ, ಅವರಿಗಿಂತ ಮುನ್ನ ಆಸ್ಪತ್ರೆಗೆ ದಾಖಲಾಗಿರುವ ಅಮಿತಾಭ್ ಮತ್ತು ಅಭಿಷೇಕ್ ಇಬ್ಬರೂ ಚಿಕಿತ್ಸೆ ಪಡೆಯುತ್ತಿದ್ದು, ಸದ್ಯದಲ್ಲೇ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.