ಅಕ್ರಮ ಚಟುವಟಿಕೆ ಹಿನ್ನೆಲೆ ಬಹುಭಾಷಾ ನಟ ಶ್ಯಾಮ್​ ಬಂಧನ: ಮತ್ತಷ್ಟು ಕಲಾವಿದರಿಗೆ ಬಂಧನ ಭೀತಿ

Shaam
Published on

ಚೆನ್ನೈ: ರಾಕಿಂಗ್​ ಸ್ಟಾರ್ ಯಶ್​ ಅಭಿನಯದ "ಸಂತು ಸ್ಟ್ರೈಟ್​ ಫಾರ್ವರ್ಡ್"​ ಚಿತ್ರದಲ್ಲಿ ಖದರ್​ ಖಳನಾಯಕನಾಗಿ ಮಿಂಚಿದ್ದ ಬಹುಭಾಷಾ ನಟ ಶ್ಯಾಮ್ ಅವರನ್ನು ಜೂಜು ಅಡ್ಡೆ ನಡೆಸುತ್ತಿದ್ದ ಆರೋಪದಲ್ಲಿ ಚೆನ್ನೈ ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದಾರೆ.

ಚೆನ್ನೈನ ನುಂಗಂಬಾಕಂನಲ್ಲಿರುವ ಶ್ಯಾಮ್ ಅವರ ಅಪಾರ್ಟೆಮೆಂಟ್​ನಲ್ಲಿ ಜೂಜಾಟ ನಡೆಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.

ತಪಾಸಣೆ ವೇಳೆ ಜೂಜಾಟಕ್ಕೆ ಬಳಸುತ್ತಿದ್ದ ವಸ್ತುಗಳು, ಟೋಕನ್​ಗಳು ಹಾಗೂ ಹಣವನ್ನು ತನಿಖಾಗಾರರು ಜಪ್ತಿ ಮಾಡಿದ್ದು, ಪ್ರಖ್ಯಾತ ತಮಿಳು ನಟ-ನಟಿಯರು ಸಹ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಲಾಕ್​ಡೌನ್​ ನಡುವೆಯೂ ನಿನ್ನೆ ತಡರಾತ್ರಿ ಅಕ್ರಮ ಚಟುವಟಿಕೆ ನಡೆಸುವಾಗ ಸಿಕ್ಕಿಬಿದ್ದಿದ್ದಾರೆ. ಸದ್ಯ ಶ್ಯಾಮ್​ ಬಂಧನವಾಗಿದ್ದು, ಇತರೆ ಕಲಾವಿದರು ಬಂಧಿಯಾಗಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಜೂಜಾಟದಲ್ಲಿ ಬಹುದೊಡ್ಡ ಮೊತ್ತವನ್ನು ಕಳೆದುಕೊಂಡ ಪ್ರಖ್ಯಾತ ನಟನೊಬ್ಬ ನೀಡಿದ ಸುಳಿವಿನಿಂದ ಜೂಜು ಅಡ್ಡೆಯ ಮೇಲೆ ದಾಳಿ ಮಾಡಲಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ಶ್ಯಾಮ್​ ಸೇರಿದಂತೆ 11 ಮಂದಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಮಿಳು, ತೆಲುಗು ಜತೆಗೆ ಕನ್ನಡದಲ್ಲೂ ಶ್ಯಾಮ್ ನಟಿಸಿದ್ದಾರೆ. ಕನ್ನಡದ "ತನನಂ ತನನಂ", ಗೇಮ್, ಸಂತು ಸ್ಟ್ರೈಟ್ ಫಾರ್ವರ್ಡ್ ಸಿನಿಮಾಗಳಲ್ಲಿ ಶ್ಯಾಮ್ ನಟಿಸಿದ್ದಾರೆ. ಸದ್ಯ ಖಳನಾಯಕನ ಪಾತ್ರಗಳಲ್ಲಿ ಶ್ಯಾಮ್​ ಮಿಂಚುತ್ತಿದ್ದರು.

ಅಂತಿಮ ವರ್ಷದ ಪದವಿಪೂರ್ವ ವಿದ್ಯಾರ್ಥಿಯೊಬ್ಬ ಆನ್‌ಲೈನ್ ಆಟದಲ್ಲಿ ತನ್ನ ಹಣವನ್ನು ಕಳೆದುಕೊಂಡ ಬಳಿಕ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಚೆನ್ನೈನಲ್ಲಿ ಸಂಚಲನ ಸೃಷ್ಟಿಸಿದ ದಿನದ ಬೆನ್ನಲ್ಲೇ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ.

ಯುವಕನೊಬ್ಬ ಆನ್​ಲೈನ್​ ಗೇಮ್​ನಲ್ಲಿ 20 ಸಾವಿರ ರೂ. ಕಳೆದುಕೊಂಡಿದ್ದ. ಇದರಿಂದ ಖಿನ್ನತೆಗೆ ಒಳಗಾಗಿದ್ದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದ. ಯುವಕರಲ್ಲಿನ ಆನ್‌ಲೈನ್ ಗೇಮಿಂಗ್ ಅಥವಾ ಜೂಜಿನ ಚಟವು ಕುಟುಂಬಗಳನ್ನು ಆರ್ಥಿಕ ತೊಂದರೆಗೆ ದೂಡುತ್ತಿದೆ. ಹೀಗಾಗಿ ಅವುಗಳನ್ನು ನಿಯಂತ್ರಿಸಲು ಕಾನೂನಿನ ಅಗತ್ಯವಿದೆ ಎಂದು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು ಇತ್ತಿಚೆಗಷ್ಟೇ ಅಭಿಪ್ರಾಯ ವ್ಯಕ್ತಪಡಿಸಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net