ಮೂಗಿನಲ್ಲಿ ಪದೇಪದೆ ರಕ್ತಸ್ರಾವ ಆಗೋದನ್ನು ನೋಡಿ ವೈದ್ಯರ ಬಳಿ ಹೋದ ರೈತನಿಗೆ ಕಾದಿತ್ತು ಬಿಗ್​ ಶಾಕ್​!

Leech
Published on

ಬೀಜಿಂಗ್​: ಮೂಗಿನಲ್ಲಿ ಪದೇಪದೆ ರಕ್ತಸ್ರಾವ ಆಗುವುದನ್ನು ನೋಡಿ ಗಾಬರಿಯಿಂದ ಆಸ್ಪತ್ರೆಗೆ ಹೋದ ಚೀನಾ ರೈತನೊಬ್ಬನಿಗೆ ಅಕ್ಷರಶಃ ಆಘಾತ ಎದುರಾಗಿತ್ತು. ಅಂಥದ್ದೇನಿತ್ತು ಮೂಗಿನಲ್ಲಿ ಎಂಬ ಕುತೂಹಲವಿದ್ದರೆ ಮುಂದೆ ಓದಿ.

ದಕ್ಷಿಣ ಚೀನಾದ ಯುನಾನ್​ ಪ್ರಾಂತ್ಯದ 57 ವರ್ಷದ ರೈತ ಎರಡು ವಾರಗಳ ಹಿಂದೆ ತನ್ನ ಜಮೀನಿನಲ್ಲಿ ಕೆಲಸ ಮಾಡುವಾಗ ಕಲುಷಿತ ನೀರನ್ನು ಕುಡಿದಿದ್ದ. ಇದಾದ ಬಳಿಕ ಆತನ ಮೂಗಿನಲ್ಲಿ ಪದೇಪದೆ ರಕ್ತಸ್ರಾವ ಆಗುವುದನ್ನು ಕಂಡು ಭಯದಿಂದ ಯುನಾನ್​ ಪ್ರಾಂತ್ಯದ ಆಸ್ಪತ್ರೆಯೊಂದಕ್ಕೆ ಭೇಟಿ ನೀಡಿದ್ದಾನೆ.

ಆಪರೇಷನ್​ ನಡೆಸಿದ ವೈದ್ಯರು ಆತನ ಮೂಗಿನಲ್ಲಿ ಸೇರಿಕೊಂಡಿದ್ದ ಜೀವಂತ ಜಿಗಣಿಯನ್ನು ಚಿಮುಟಗಳ ಸಹಾಯದಿಂದ ಹೊರತೆಗೆದಿದ್ದಾರೆ. ಇದನ್ನು ನೋಡಿದ ರೈತ ಒಂದು ಕ್ಷಣ ಬೆಸ್ತು ಬಿದ್ದಿದ್ದಾರೆ. ಹೊಲಸು ನೀರನ್ನು ಕುಡಿದ ಬಳಿಕ ಯಾವುದೋ ಪ್ಯಾರಸೈಟ್​ ಜೀವಿ ಮೂಗಿನಲ್ಲಿ ಸೇರಿಕೊಂಡಿರಬಹುದು ಎಂದು ಆರಂಭದಲ್ಲಿ ವೈದ್ಯರು ನಂಬಿದ್ದರು.

ಅಂದಹಾಗೆ ಜಿಗಣಿಗಳು ತಮ್ಮ ದೇಹದ ತೂಕಕ್ಕಿಂತ ಐದು ಪಟ್ಟು ಹೆಚ್ಚು ರಕ್ತವನ್ನು ಹೀರಿಕೊಳ್ಳಬಹುದು, ಆದರೆ ಅವು ಗಾತ್ರದಲ್ಲಿ ಬೇಗನೆ ಬೆಳೆಯುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಇನ್ನು ರೈತನ ಮೂಗಿನಿಂದ ತೆಗೆಯಲಾದ ಜಿಗಣಿ ಮೂರು ಸೆಂಟಿಮೀಟರ್​ (1.1 ಇಂಚು) ಉದ್ದವಿತ್ತು. ಹೊರ ತೆಗೆಯುವಾಗ ಜಿಗಣಿ ಸುರುಳಿ ಸುತ್ತಿಕೊಂಡಿತ್ತು. ಇದರಿಂದ ವೈದ್ಯರಿಗೆ ಸ್ವಲ್ಪ ಕಷ್ಟವಾಯಿತು.

ಜಿಗಣಿಗಳು ತಮ್ಮಷ್ಟಕ್ಕೆ ತಾವೇ ವ್ಯಕ್ತಿಯೊಬ್ಬನ ಚರ್ಮ ಅಥವಾ ಮೂಗು ಮತ್ತು ಬಾಯಿಯೊಳಗೆ ದಾಳಿ ಮಾಡಬಹುದು. ಇದು ಸಂಭವಿಸಿದಾಗ ವ್ಯಕ್ತಿ ಹಿರುಡಿನಿಯಾಸಿಸ್ ಎಂಬ ಸ್ಥಿತಿಯಿಂದ ಬಳಲುತ್ತಾನೆ ಎಂದು ಪ್ಯಾರಾಸೈಟ್​ ತಜ್ಞರಾದ ಮಾರ್ಕ್​ ಸಿದ್ದಲ್​ ಎಂಬುವರು ತಿಳಿಸಿದ್ದಾರೆ. ಸಿದ್ದಲ್​ ಅವರು ನ್ಯೂಯಾರ್ಕ್​ನಲ್ಲಿರುವ ಅಮೆರಿಕನ್​ ಮ್ಯೂಸಿಯಂ ನ್ಯಾಚುರಲ್​ ಹಿಸ್ಟರಿಯ ಸಂಶೋಧಕರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net