

ಬೆಂಗಳೂರು: ರಾಗಿಣಿ ದ್ವಿವೇದಿ ನಟಿಸಿರುವ ಸಸ್ಪೆನ್ಸ್ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ‘ಶೀಲ’. ಕನ್ನಡ, ಮಲಯಾಳಂ ಭಾಷೆಗಳಲ್ಲಿ ಮೂಡಿಬಂದಿರುವ ಈ ಚಿತ್ರ ಕಳೆದ ಶುಕ್ರವಾರ (ಜು. 28) ಮಲಯಾಳಂನಲ್ಲಿ ರಿಲೀಸ್ ಆಗಿದ್ದು, ಮುಂದಿನ ಶುಕ್ರವಾರ (ಜು. 4) ಕನ್ನಡದಲ್ಲಿ ಬಿಡುಗಡೆಯಾಗಲಿದೆ. ಹೀಗಾಗಿಯೇ ಇತ್ತೀಚೆಗಷ್ಟೆ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಯಿತು.
‘ಶೀಲ’ ಟ್ರೇಲರ್ ರಿಲೀಸ್ ಮಾಡಿದ ಪ್ರಿಯಾಂಕಾ ಉಪೇಂದ್ರ, ‘ವಿಷಯಾಧಾರಿತ ಮಹಿಳಾ ಪ್ರಧಾನ ಚಿತ್ರಗಳಲ್ಲಿ ನಟಿಸುವುದು ಕಷ್ಟ. ಪಾತ್ರದ ಭಾವನೆಗಳನ್ನು ಅನುಭವಿಸಿ ನಟಿಸಬೇಕು. ರಾಗಿಣಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಜತೆಗೆ ‘ಶೀಲ’ ಅವರ ಅತ್ಯುತ್ತಮ ಸಿನಿಮಾಗಳಲ್ಲೊಂದು ಅಂತ ಟ್ರೇಲರ್ ನೋಡಿದರೆ ಗೊತ್ತಾಗುತ್ತದೆ’ ಎಂದು ಚಿತ್ರತಂಡಕ್ಕೆ ಶುಭಹಾರೈಸಿದರು.
ನಾಯಕಿ ರಾಗಿಣಿ, ‘ನನ್ನ ಮನಸ್ಸಿಗೆ ತುಂಬ ಹತ್ತಿರದ ಚಿತ್ರವಿದು. ಮಲಯಾಳಂನಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಸೆನ್ಸಾರ್ ಸಮಸ್ಯೆಯಿಂದ ಒಂದು ವಾರ ತಡವಾಗಿ ಕನ್ನಡದಲ್ಲಿ ರಿಲೀಸ್ ಆಗಲಿದೆ. ತೀವ್ರವಾದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಮಣಿಪುರ, ಪಶ್ಚಿಮ ಬಂಗಾಳ ಸೇರಿ ಹಲವೆಡೆ ಹೆಣ್ಣುಮಕ್ಕಳ ಮೇಲೆ ಶೋಷಣೆ ನಡೆಯುತ್ತಲೇಯಿದೆ. ವಿದ್ಯಾವಂತ ಸಮಾಜದಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ನಿಜಕ್ಕೂ ಶೋಚನೀಯ. ಹೆಣ್ಣುಮಕ್ಕಳಿಗೆ ರಕ್ಷಣೆ ಇದೆಯಾ ಎಂಬ ಅನುಮಾನ ಮೂಡಿಸುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಬಾಲು ನಾರಾಯಣ್ ನಿರ್ದೇಶನದಲ್ಲಿ ಮೂಡಿಬಂದಿರುವ ‘ಶೀಲ’ ಚಿತ್ರಕ್ಕೆ ಅರುಣ್ ಛಾಯಾಗ್ರಹಣ, ಅಬೇ ಡೇವಿಡ್ ಸಂಗೀತ, ಕಿರಣ್ ದಾಸ್ ಸಂಕಲನವಿರಲಿದೆ.