More

    ಆರ ಚಿತ್ರದ ವಿಮರ್ಶೆ: ಅನ್ಯಾಯಗಳ ಜಗತ್ತಿನಲ್ಲಿ ರಕ್ಷಣೆಯ ಹಠ ತೊಟ್ಟ ಆರ

    ಚಿತ್ರ: ಆರ
    ನಿರ್ದೇಶನ: ಅಶ್ವಿನ್‌ ವಿಜಯಮೂರ್ತಿ
    ತಾರಾಗಣ: ರೋಹಿತ್‌, ದೀಪಿಕಾ ಆರಾಧ್ಯ, ಆನಂದ್‌ ನೀನಾಸಂ, ಸತ್ಯ ರಾಜ್‌ ಮುಂತಾದವರು

    ದೈವಿಕವಾದ ಅಂಶವನ್ನು ಎಳೆಯಾಗಿಟ್ಟುಕೊಂಡು ಕಥೆಯನ್ನು ಹೇಳಲು ಸೂಕ್ಷ್ಮತೆ ಬೇಕು. ಚೂರು ಎಚ್ಚರಿಕೆಯೂ ಬೇಕು. ಏಕೆಂದರೆ, ಭಾವನೆಗಳಿಗೆ ಸಂಬಂಧಪಟ್ಟ ವಿಷಯವನ್ನು ದೃಶ್ಯ ರೂಪದಲ್ಲಿ ತೋರಿಸುವುದು ಸುಲಭವಲ್ಲ. ಅದು ಈ ಕಾಲಕ್ಕೂ ಪ್ರಸ್ತುತವಾಗಿರದಿದ್ದರೆ ಸಿನಿಮಾ ಸೋಲುತ್ತದೆ. ಕೇವಲ ಅಧ್ಯಾತ್ಮ ಅಂಶವನ್ನು ಇಟ್ಟು ಕಥೆ ಹೇಳಿದರೆ ಕುತೂಹಲ ಇರುವುದಿಲ್ಲ. ಕೇವಲ ಕಮರ್ಷಿಯಲ್‌ ಅಂಶವನ್ನು ಇಟ್ಟುಕೊಂಡು ಸಿನಿಮಾ ಮಾಡಿದರೆ ಹತ್ತರಲ್ಲಿ ಹನ್ನೊಂದು ಎಂಬಂತೆ ಸಿನಿಮಾ ಆಗಿಬಿಡುತ್ತದೆ. ಈ ಎಲ್ಲ ಅಂಶವನ್ನು ಗಮನದಲ್ಲಿಟ್ಟುಕೊಂಡು ಮಾಡಿದ ಪ್ರಯತ್ನ ʼಆರʼ ಎನ್ನಬಹುದು.

    ಏನಿದು ಆರ?
    ಪ್ರತಿಯೊಂದು ಪ್ರದೇಶಕ್ಕೂ ಅದರದ್ದೇ ಆದ ಚರಿತ್ರೆ ಇರುತ್ತದೆ. ದೈವದ ಆಶೀರ್ವಾದ ಇರುತ್ತದೆ ಎನ್ನುವುದು ಅನೇಕರ ನಂಬಿಕೆ ಕೂಡ ಹೌದು. ಅದೇ ರೀತಿಯ ಒಂದು ಕಾಡಿನ ಪ್ರದೇಶದಲ್ಲಿ ನಡೆಯುವ ಘಟನೆ. ಇದೊಂದು ರೀತಿಯಲ್ಲಿ ದುಷ್ಟಶಕ್ತಿ ಹಾಗೂ ದೈವಶಕ್ತಿಯ ನಡುವೆ ನಡೆಯುವ ಸಂಘರ್ಷದ ಕಥೆ. ಇದನ್ನು ಪ್ರೇಕ್ಷಕನ ಮನ ಮುಟ್ಟುವಂತೆ ನಿರೂಪಿಸುವಲ್ಲಿ ನಿರ್ದೇಶಕ ಅಶ್ವಿನ್‌ ವಿಜಯಮೂರ್ತಿ ಹಾಗೂ ʼಆರʼ ಚಿತ್ರತಂಡ ಗೆದ್ದಿದೆ ಎನ್ನಬಹುದು. ದಶಮಾನ ಹಿಂದಿನಿಂದ ಆರಂಭಗೊಂಡು ಪ್ರಸ್ತುತ ಕಾಲದವರೆಗೆ ಕಥೆ ಸಾಗುವುದರಿಂದ ಈ ಕಾಲಕ್ಕೂ ಹೋಲುವಂತೆ ಮಾಡಿದ್ದಾರೆ. ಇದಕ್ಕೆ ಪೂರಕವಾದ ವಿಭಿನ್ನ ಪ್ರಯತ್ನದ ಚಿತ್ರಕಥೆ ಇದೆ. ಆದರೆ, ಇಡೀ ಸಿನಿಮಾ ಚಲಿಸುವುದು ಹಿನ್ನೆಲೆ ಧ್ವನಿಯ ಶಕ್ತಿಯಿಂದ. ಅದು ಇನ್ನೂ ಬಲವಾಗಲು, ಹಾಗೂ ಕೆಲವೆಡೆ ಇನ್ನೂ ಚೂರು ಸ್ಪಷ್ಟತೆ ನೀಡಲು ಅವಕಾಶವಿತ್ತು.  

    ಜೀವನದ ಮೌಲ್ಯಗಳನ್ನು ತಿಳಿಸುವ ಪಯಣ:
    ಈ ಚಿತ್ರದಲ್ಲಿ ದುಷ್ಟ ಶಕ್ತಿಗಳಿವೆ. ಹಾಗೇ ಅವುಗಳ ವಿರುದ್ಧ ಹೋರಾಡುವ, ರಕ್ಷಿಸುವ ಶಕ್ತಿಗಳೂ ಇವೆ. ಇವೆಲ್ಲಕ್ಕಿಂತ ಮಿಗಿಲಾಗಿ, ಒಬ್ಬ ವ್ಯಕ್ತಿಯ ಪಯಣವನ್ನು ವಿವರಿಸುತ್ತಲೇ, ನಂಬಿಕೆ, ಪ್ರೀತಿ ಎಂಬ ಜೀವನದ ಹಲವು ಮೌಲ್ಯಗಳನ್ನು ತಿಳಿಸುತ್ತದೆ ಸಿನಿಮಾ. ಒಂದೊಳ್ಳೆ ಉದ್ದೇಶದಿಂದ ಸಿನಿಮಾ ಮಾಡಲಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ. ʼಆರʼ ಪಾತ್ರದಲ್ಲಿ ಕಾಣಿಸಿಕೊಂಡ ರೋಹಿತ್‌ ನಟನೆ ಖುಷಿ ಕೊಡುತ್ತದೆ. ʼಆರʼನ ಜೀವನದಲ್ಲಿ ನಡೆಯುವ ಘಟನೆ ಹೇಗೆ ಅವನ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ? ಅದರಿಂದ ಆತ ಹೇಗೆ ಬದಲಾಗುತ್ತಾ ಹೋಗುತ್ತಾನೆ? ಎನ್ನುವುದನ್ನು ದೃಶ್ಯರೂಪದಲ್ಲಿ ಸಹಜವಾಗಿ ಕಾಣಬಹುದು. ಟಾಮ್‌ ಬಾಯ್‌ನಂಥ ಪಾತ್ರದಲ್ಲಿ ನಾಯಕನಿಗೆ ಜೋಡಿಯಾದ ದೀಪಿಕಾ ಆರಾಧ್ಯ ಗಮನ ಸೆಳೆಯುತ್ತಾರೆ. ಇನ್ನು ಪ್ರಮುಖ ಪಾತ್ರದಲ್ಲಿ ಅಬ್ಬರಿಸಿದ ಆನಂದ್ ನೀನಾಸಂ‌ ಮಿಂಚಿದ್ದಾರೆ. ಅಗತ್ಯವಿರುವ ಪರಿಸರ, ಗಿರೀಶ್‌ ಹೊತೂರು ಹಿನ್ನೆಲೆ ಸಂಗೀತ, ಶ್ರೀಹರಿ ಛಾಯಾಗ್ರಹಣ ಚಿತ್ರಕ್ಕೆ ಜೀವ ತುಂಬಿದೆ. ಸುಧಾರಣೆಗೆ ಹಲವು ಅಂಶಗಳು ಇದ್ದರೂ ಒಂದೊಳ್ಳೆಯ ಪ್ರಯತ್ನದ ಮೂಲಕ ಹೊಸ ತಂಡ ಭರವಸೆ ಮೂಡಿಸಿದೆ.

    ಸ್ಟಾರ್:‌ 3/5

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts