

ವಿಜಯವಾಣಿ ಸುದ್ದಿಜಾಲ ಬೆಂಗಳೂರು:
"ಬಜಾರ್', "ಬೈಟು ಲವ್' ಬಳಿಕ ಧನ್ವೀರ್ ಗೌಡ ನಾಯಕನಾಗಿರುವ ಚಿತ್ರ "ವಾಮನ'. ಶಂಕರ್ ರಾಮ್ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಆ್ಯಕ್ಷನ್ ಎಂಟರ್ಟೇನರ್ ಚಿತ್ರದ ಪೋಸ್ಟರ್ ಟೀಸರ್ ಈಗಾಗಲೇ ರಿಲೀಸ್ ಆಗಿದ್ದು, ಇದೀಗ ಭಾನುವಾರ (ಜು. 30) ಚಿತ್ರದ ಮೊದಲ ಹಾಡು ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಭೂಷಣ್ ಮಾಸ್ಟರ್ ನೃತ್ಯನಿರ್ದೇಶನದಲ್ಲಿ ಮೂಡಿಬಂದಿರುವ "ವಾ..ವಾ.. ವಾಮನ, ಇವನ ಮೈಮೇಲೆ ಬರುತಾನೆ ರಾವಣ' ಎಂದು ಸಾಗುವ ನಾಯಕನನ್ನು ಪರಿಚಯಿಸುವ ಹಾಡನ್ನು ಏಳು ಅದ್ದೂರಿ ಸೆಟ್ಗಳಲ್ಲಿ ಚಿತ್ರೀಕರಣ ಮಾಡಿರುವುದು ವಿಶೇಷ. ಈ ಹಾಡಿಗೆ "ಜೇಮ್ಸ್' ನಿರ್ದೇಶಕ ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದು, ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಚಿತ್ರದ ಎಲ್ಲ ಹಾಡುಗಳಿಗೂ ಭೂಷಣ್ ಮಾಸ್ಟರ್ ನೃತ್ಯನಿರ್ದೇಶನ ಮಾಡಿದ್ದು, ನಾಯಕ ಧನವೀರ್ ಮತ್ತು ನಾಯಕಿ ರೀಷ್ಮಾ ನಾಣಯ್ಯ ಅವರಿಂದ ಚೆನ್ನಾಗಿಯೇ ಕುಣಿಸಿದ್ದಾರೆ.
ಸಂಪತ್, ಆದಿತ್ಯ ಮೆನನ್, ಅಚ್ಯುತ್ ಕುಮಾರ್, ಅವಿನಾಶ್, ತಾರಾ, ಶಿವರಾಜ್ ಕೆಆರ್ ಪೇಟೆ, ಪೆಟ್ರೋಲ್ ಪ್ರಸನ್ನ, ಕಾಕ್ರೋಚ್ ಸುಧಿ ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಮಹೇಂದ್ರ ಸಿಂಹ ಛಾಯಾಗ್ರಹಣ, ಸುರೇಶ್ ಆಮುರ್ಗಂ ಸಂಕಲನ, ಅರ್ಜುನ್ ರಾಜು, ವಿಕ್ರಮ್ ಮೋರ್ ಮತ್ತು ಜಾಲಿ ಬಾಸ್ಟಿನ್ ಸಾಹಸ, ನವೀನ್ ಕಲಾ ನಿರ್ದೇಶನವಿರಲಿದೆ.