'ಬಾಹುಬಲಿ 2' ಬಿಡುಗಡೆಯಾದ ದಿನದಂದೇ 'ರಾಧೇ ಶ್ಯಾಮ್​'?

Radhe Shyam - Final
Published on

ಹೈದರಾಬಾದ್​​: ಶುಕ್ರವಾರ (ಅಕ್ಟೋಬರ್​ 23) ಟಾಲಿವುಡ್​ ನಟ ಪ್ರಭಾಸ್​ ಅವರ ಹುಟ್ಟುಹಬ್ಬ. ಈ ಹುಟ್ಟುಹಬ್ಬದ ಸಂದರ್ಭದಲ್ಲಿ 'ರಾಧೇ ಶ್ಯಾಮ್​' ತಂಡದವರು ಎರಡು ಗಿಫ್ಟ್​ಗಳನ್ನು ಕೊಡುವ ಸಾಧ್ಯತೆ ಇದೆ.

ಮೊದಲನೆಯದಾಗಿ, ಹುಟ್ಟುಹಬ್ಬಕ್ಕೆ ಒಂದು ದಿನ ಮುಂಚಿತವಾಗಿಯೇ, ಅಂದರೆ ನಾಳೆ ಗುರುವಾರ ಚಿತ್ರದ ಮೋಷನ್​ ಪೋಸ್ಟರ್​ ಬಿಡುಗಡೆಯಾಗಲಿದೆಯಂತೆ. ಇದಕ್ಕೂ ಮೊದಲು ಚಿತ್ರದ ಒಂದು ಪೋಸ್ಟರ್​ ಮತ್ತು ನಾಯಕಿಯನ್ನು ಪರಿಚಯಿಸುವ ಒಂದು ಪೋಸ್ಟರ್​ ಬಿಡುಗಡೆ ಮಾಡಲಾಗಿತ್ತು. ಇದೀಗ ಮೋಷನ್​ ಪೋಸ್ಟರ್​ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಇನ್ನು ಎರಡನೆಯದಾಗಿ, ಪ್ರಭಾಸ್​ ಹುಟ್ಟುಹಬ್ಬಕ್ಕೆ ಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಿಸಲಾಗುತ್ತದಂತೆ. ಈಗಾಗಲೇ, ಚಿತ್ರದ ಆರ್ಧದಷ್ಟು ಚಿತ್ರೀಕರಣ ಮುಗಿದಿದ್ದು, ಮುಂದಿನ ಎರಡು ತಿಂಗಳಲ್ಲಿ ಚಿತ್ರೀಕರಣ ಸಂಪೂರ್ಣವಾಗಲಿದೆಯಂತೆ. ಆ ನಂತರ, ಮುಂದಿನ ವರ್ಷ ಚಿತ್ರ ಬಿಡುಗಡೆ ಎಂದು ಹೇಳಲಾಗುತ್ತಿದೆ.

ಎಲ್ಲಾ ಸರಿ, ಚಿತ್ರದ ಬಿಡುಗಡೆ ಯಾವಾಗ ಆಗಬಹುದು ಎಂಬ ಪ್ರಶ್ನೆಗೆ, 'ಬಾಹುಬಲಿ 2' ಬಿಡುಗಡೆಯಾದ ದಿನವೇ 'ರಾಧೇ ಶ್ಯಾಮ್​' ಸಹ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. 'ಬಾಹುಬಲಿ 2' ಚಿತ್ರವು ಏಪ್ರಿಲ್​ 28ಕ್ಕೆ ಬಿಡುಗಡೆಯಾಗಿತ್ತು. ಈಗ 'ರಾಧೇ ಶ್ಯಾಮ್​' ಚಿತ್ರವನ್ನು ಸಹ ಏಪ್ರಿಲ್​ 28 ಅಥವಾ ಅದೇ ವಾರದಲ್ಲಿ ಮಾಡುವುದು ಚಿತ್ರತಂಡದ ಯೋಚನೆ.

ಸದ್ಯಕ್ಕೆ ಚಿತ್ರಪ್ರದರ್ಶನ ಪ್ರಾರಂಭವಾಗುತ್ತಿದ್ದು, ಮುಂದಿನ ಬೇಸಿಗೆ ರಜೆಯ ಹೊತ್ತಿಗೆ ಜನ ದೊಡ್ಡ ಮಟ್ಟದಲ್ಲಿ ಚಿತ್ರಮಂದಿರಗಳಿಗೆ ಬರುತ್ತಾರೆ ಎಂಬ ನಿರೀಕ್ಷೆ ಇದೆ. ಈ ಸಂದರ್ಭದಲ್ಲಿ ಚಿತ್ರವನ್ನು ಬಿಡುಗಡೆ ಮಾಡಿದರೆ ಅನುಕೂಲ ಎಂದು ಚಿತ್ರತಂಡ ಯೋಚಿಸಿದ್ದು, ಅದರಂತೆ ಏಪ್ರಿಲ್ 28 ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net