'ಜನ ಗಣ ಮನ' ಎನ್ನುತ್ತಿದ್ದ ಪೃಥ್ವಿರಾಜ್​ಗೆ ಕರೊನಾ ಪಾಸಿಟಿವ್​

Prithviraj - Final
Published on

ತಿರುವನಂತಪುರಂ: ಮಲಯಾಳಂನ ಖ್ಯಾತ ನಟ ಪೃಥ್ವಿರಾಜ್​ ಸುಕುಮಾರನ್​ಗೆ ಕರೊನಾ ಪಾಸಿಟಿವ್​. ಹಾಗಂತ ಅವರೇ ಸೋಷಿಯಲ್​ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಸದ್ಯ ಕ್ವಾರಂಟೈನ್​ನಲ್ಲಿರುವ ಅವರು, ಆದಷ್ಟು ಬೇಗ ಗುಣಮುಖರಾಗಿ ಹೊರಬರುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಕರೊನಾ ಕೇಸ್​ಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದ ಹಿನ್ನೆಲೆಯಲ್ಲಿ ಇಡೀ ದೇಶದಲ್ಲಿ ಮಾರ್ಚ್​ನಲ್ಲಿ ಲಾಕ್​ಡೌನ್​ ಘೋಷಣೆಯಾಗಿತ್ತು. ಈ ಸಂದರ್ಭದಲ್ಲಿ ಪೃಥ್ವಿರಾಜ್​, ಜೋರ್ಡಾನ್​ನ ವಾಡಿರಮ್​ ಮರಳುಗಾಡಿನಲ್ಲಿ 'ಆಡುಜೀವಿತಂ' ಎಂಬ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಅಂತಾರಾಷ್ಟ್ರೀಯ ಫ್ಲೈಟ್​ಗಳ ಓಡಾಟಕ್ಕೆ ನಿರ್ಬಂಧ ಹೇರಿದ ಕಾರಣ, ಅವರು ಸುಮಾರು ಎರಡು ತಿಂಗಳುಗಳ ಕಾಲ ಅಲ್ಲೇ ಉಳಿಯಬೇಕಾಯಿತು.

ಜೂನ್​-ಜುಲೈ ಹೊತ್ತಿಗೆ ಲಾಕ್​ಡೌನ್​ ಸ್ವಲ್ಪ ಸಡಿಲಗೊಂಡು ಅಂತಾರಾಷ್ಟ್ರೀಯ ಫ್ಲೈಟುಗಳ ಓಡಾಟ ಪ್ರಾರಂಭವಾದ ಮೇಲೆ, ಪೃಥ್ವಿರಾಜ್​ ಮತ್ತು ತಂಡ ಕೇರಳಕ್ಕೆ ವಾಪಸ್ಸಾಯಿತು. 14 ದಿನಗಳ ಕ್ವಾರಂಟೈನ್​ ಮುಗಿಸಿಯೇ ಪೃಥ್ವಿರಾಜ್​ ಮನೆಗೆ ವಾಪಸ್ಸಾಗಿದ್ದರು. ಆಗ ಟೆಸ್ಟ್​ ಮಾಡಿಸಿದಾಗಲೂ ಅವರಿಗೆ ನೆಗೆಟಿವ್​ ಬಂದಿತ್ತು. ಈಗ ಅವರಿಗೆ ಕರೊನಾ ಪಾಸಿಟಿವ್​ ಕಾಣಿಸಿಕೊಂಡಿದೆ.

ಅದು ಹೇಗೆ ಸಾಧ್ಯವಾಯಿತು ಎಂದರೆ, ಅದಕ್ಕೆ ಕಾರಣ 'ಜನ ಗಣ ಮನ' ಎಂದು ಹೇಳಲಾಗುತ್ತಿದೆ. ಪೃಥ್ವಿರಾಜ್​ ಇತ್ತೀಚಿನ ದಿನಗಳಲ್ಲಿ 'ಜನ ಗಣ ಮನ' ಎಂಬ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದರು. ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿಯೇ ಚಿತ್ರೀಕರಣ ಮಾಡಲಾಗುತ್ತಿತ್ತಂತೆ. ಆದರೆ, ಚಿತ್ರೀಕರಣ ಮುಗಿಯುತ್ತಾ ಬಂದ ಹಾಗೆ, ಚಿತ್ರತಂಡದ ನಾಲ್ಕೈದು ಜನರಲ್ಲಿ ಕರೊನಾ ಪಾಸಿಟಿವ್​ ಕಾಣಿಸಿಕೊಂಡಿದೆ. ಕೊನೆಗೆ ಟೆಸ್ಟ್​ ಮಾಡಿಸಿದಾಗ ಪೃಥ್ವಿರಾಜ್​ಗೂ ಕರೊನಾ ಇರುವುದು ಗೊತ್ತಾಗಿದೆ.

ಇದೀಗ ಪೃಥ್ವಿರಾಜ್​ ಮತ್ತೆ ಕ್ವಾರಂಟೈನ್​ನಲ್ಲಿದ್ದಾರೆ. ಅಷ್ಟೇ ಅಲ್ಲ, ಚಿತ್ರೀಕರಣದಲ್ಲಿ ಭಾಗವಹಿಸಿದ್ದ ಮತ್ತು ತಮ್ಮ ಜತೆಗಿದ್ದ ಮಂದಿಗೆ ಕ್ವಾರಂಟೈನ್​ ಮಾಡಿಕೊಳ್ಳುವುದಕ್ಕೆ ಸಲಹೆ ನೀಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಅವರು ವಾಪಸ್ಸಾಗಿ ಹೊಸ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net