ನಾನು ಲೈಂಗಿಕ ವ್ಯಸನಿಯಂತೆ! ಧನುಷ್​, ಬೈಲ್ವಾನ್​ ರಂಗನಾಥನ್​ ವಿರುದ್ಧ ದೂರು ದಾಖಲಿಸಿದ ಗಾಯಕಿ ಸುಚಿತ್ರಾ

Singer Suchitrha
Published on

ಚೆನ್ನೈ: ನಟ ಹಾಗೂ ಪತ್ರಕರ್ತ ಬೈಲ್ವಾನ್ ರಂಗನಾಥನ್ ಕಳೆದ ಕೆಲ ವರ್ಷಗಳಿಂದ ತಮ್ಮ ಯೂಟ್ಯೂಬ್​ ಚಾನೆಲ್​ ಮೂಲಕ ನಟ ಹಾಗೂ ನಟಿಯರನ್ನು ಗುರಿಯಾಗಿರಿಸಿಕೊಂಡು ಅವರ ವಿರುದ್ಧ ಗಾಸಿಪ್​ಗಳನ್ನು ಸೃಷ್ಟಿ ಮಾಡುವ ಮೂಲಕ ಭಾರೀ ಸುದ್ದಿಯಾಗುತ್ತಿರುವುದಲ್ಲದೆ ಕಲಾವಿದರ ಆಕ್ರೋಶಕ್ಕೂ ಕಾರಣವಾಗಿದ್ದಾರೆ. ಅನೇಕ ಕಲಾವಿದರು ರಂಗನಾಥನ್​ ವಿರುದ್ಧ ತಮ್ಮ ಧ್ವನಿ ಕೂಡ ಎತ್ತಿದ್ದಾರೆ.

ಇದೀಗ ಕಾಲಿವುಡ್​ ಸಿಂಗರ್​ ಸುಚಿತ್ರಾ ಅವರು ರಂಗನಾಥನ್​ ವಿರುದ್ಧ ಚೆನ್ನೈ ಪೊಲೀಸ್​ ಆಯುಕ್ತರಿಗೆ ದೂರು ದಾಖಲಿಸಿದ್ದು, ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ತನ್ನ ವಿರುದ್ಧ ಆಕ್ಷೇಪಾರ್ಹ ಕಾಮೆಂಟ್​ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕಳೆದ ಮಾರ್ಚ್​ನಲ್ಲಿ ಪೋಸ್ಟ್​ ಮಾಡಿದ ವಿಡಿಯೋದಲ್ಲಿ ನನ್ನ ವಿರುದ್ಧ ಅಶ್ಲೀಲವಾಗಿ ಮಾತನಾಡಿದ್ದಾರೆ. ನನ್ನನ್ನು ಡ್ರಗ್ಸ್​ ಮತ್ತು ಲೈಂಗಿಕ ವ್ಯಸನಿ ಎಂದು ರಂಗನಾಥನ್​ ಕರೆದಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಿ ಎಂದು ಸುಚಿತ್ರಾ ದೂರಿನಲ್ಲಿ ತಿಳಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ರಂಗನಾಥನ್​ ಉದ್ದೇಶಪೂರ್ವಕವಾಗಿ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಇದರಿಂದ ನನಗೆ ಕಾಲಿವುಡ್​ನಲ್ಲಿ ಯಾರೂ ಅವಕಾಶಗಳನ್ನು ನೀಡುತ್ತಿಲ್ಲ. ಪ್ರಸ್ತುತ ನನ್ನ ಆದಾಯ ಶೂನ್ಯವಾಗಿರಲು ರಂಗನಾಥನ್ ಕಾರಣ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. 2017ರ ನಂತರ ನಾನು ಸಲ್ಲಿಸಿರುವ ಐಟಿ ರಿಟರ್ನ್ ನೋಡಿದರೆ ಸತ್ಯಾಂಶ ತಿಳಿಯುತ್ತದೆ ಎಂದಿದ್ದಾರೆ.

2017ರಲ್ಲಿ ಸುಚಿತ್ರಾ ಅವರ ಟ್ವಿಟರ್ ಪೇಜ್​ನಿಂದ ಕಾಲಿವುಡ್​ ಸೆಲೆಬ್ರಿಟಿಗಳ ಕೆಲವೊಂದು ಅಶ್ಲೀಲ ವಿಡಿಯೋ ಹೊರಬಿದ್ದ ಬಳಿಕ ಭಾರೀ ವಿವಾದ ಸೃಷ್ಟಿಯಾಗಿತ್ತು. ಇದನ್ನು ಸುಚಿ ಲೀಕ್ಸ್ ಪ್ರಕರಣ ಎಂದೇ ಕರೆಯಲಾಗಿದೆ. ನನ್ನ ಟ್ವಿಟರ್​ ಖಾತೆ ಹ್ಯಾಕ್​ ಆಗಿತ್ತು ಎಂದು ಸುಚಿತ್ರಾ ಹೇಳಿದ್ದರು. ಆದರೆ, ಅದು ಉದ್ದೇಶಪೂರ್ವಕವಾಗಿಯೇ ಲೀಕ್​ ಮಾಡಿದ್ದರು ಎನ್ನಲಾಗಿದೆ. ಆದರೂ ಈ ಪ್ರಕರಣ ಬಹಳ ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು.

ಸುಚಿ ಲೀಕ್ಸ್​ ಪ್ರಕರಣವನ್ನು ಉಲ್ಲೇಖಿಸಿರುವ ಸುಚಿತ್ರಾ, ನಟ ಧನುಷ್​, ನಿರ್ದೇಶಕ ವೆಂಕಟ್​ ಪ್ರಭು ಮತ್ತು ಕಾರ್ತಿಕ್​ ಕುಮಾರ್​ ಬೈಲ್ವಾನ್​ ರಂಗನಾಥನ್​ ಬೆಂಗಾವಲಾಗಿದ್ದಾರೆ. ಇವರು ರಂಗನಾಥನ್​ನನ್ನು ಛೂ ಬಿಟ್ಟು ನನ್ನ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುವುದಾಗಿ ಸುಚಿತ್ರಾ ಅವರಿಗೆ ಭರವಸೆ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net