

ಹೈದರಾಬಾದ್: ನಟ ನಾಗಚೈತನ್ಯರನ್ನು ಪ್ರೀತಿಸಿ ಮದುವೆ ಆಗಿದ್ದ ನಟಿ ಸಮಂತಾ ಕೆಲ ವೈಯಕ್ತಿಕ ಕಾರಣಾಂತರಗಳಿಂದ ಭಾರವಾದ ಮನಸ್ಸಿನಿಂದ ಡಿವೋರ್ಸ್ ಪಡೆದುಕೊಂಡಿದ್ದಾರೆ. ಇದಾದ ಬಳಿಕ ಅವರ ವಿರುದ್ಧ ಕೇಳಿಬಂದ ವದಂತಿಗಳಿಂದ ತೀವ್ರ ಮನನೊಂದಿರುವ ಸಮಂತಾ, ಇದೀಗ ಅದರಿಂದ ಹೊರಬಂದು ಫ್ರೆಂಡ್ಸ್ ಜತೆ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಮೂಲಕ ಹೊಸ ಜೀವನ ಆರಂಭಿಸುವ ಉತ್ಸುಕದಲ್ಲಿದ್ದಾರೆ. ಹಲವು ಅಡೆತಡೆಗಳನ್ನು ಮೆಟ್ಟಿ ನಿಂತಿರುವ ಸಮಂತಾ ಇದೀಗ ಕಹಿ ಘಟನೆಯನ್ನು ಮರೆತು ಸಹಜ ಜೀವನಕ್ಕೆ ಮರಳಿದ್ದಾರೆ.
ಇದೀಗ ಹೆಣ್ಣು ಮಕ್ಕಳನ್ನು ಹೆತ್ತು ಮದುವೆಯ ಬಗ್ಗೆ ಚಿಂತಿಸುವ ಪಾಲಕರಿಗೆ ಸಮಂತಾ ಸಲಹೆಯೊಂದನ್ನು ನೀಡಿದ್ದಾರೆ. ಪಾಲಕರು ತಮ್ಮ ಹೆಣ್ಣು ಮಕ್ಕಳಿಗೆ ಸ್ವಯಂ ಪ್ರೀತಿಯ ಬಗ್ಗೆ ಕಲಿಸಿ ಎಂದು ಕರೆ ನೀಡಿದ್ದಾರೆ.
ನನ್ನನ್ನು ಯಾರು ಮದುವೆ ಆಗುತ್ತಾರೆ ಎಂದು ಯೋಚಿಸದಂತೆ ನಿಮ್ಮ ಮನೆಯ ಮಕ್ಕಳನ್ನು ಬೆಳೆಸಿ. ಮದುವೆಗೆ ಹಣ ಕೂಡಿಡುವ ಬದಲು ಅದನ್ನು ಆಕೆಯ ಶಿಕ್ಷಣಕ್ಕೆ ವ್ಯಯಿಸಿ, ಅದರಲ್ಲೂ ಬಹುಮುಖ್ಯವಾಗಿ ಆಕೆಯನ್ನು ಮದುವೆಗೆ ತಯಾರು ಮಾಡದಂತೆ ಆಕೆಗೋಸ್ಕರ ತಯಾರು ಮಾಡಿ. ಸ್ವಯಂ ಪ್ರೀತಿ ಹಾಗೂ ಆತ್ಮ ವಿಶ್ವಾಸವನ್ನು ಬೆಳೆಸಿ ಎಂದು ಸಮಂತಾ, ಹೆಣ್ಣು ಮಕ್ಕಳ ಪಾಲಕರಿಗೆ ಸಲಹೆ ನೀಡಿದ್ದಾರೆ.
ತನ್ನ ಜೀವನದಲ್ಲಿ ಎದುರಾದ ಅನಿರೀಕ್ಷಿತ ಘಟನೆಗಳಿಂದ ಸಾಕಷ್ಟು ಅನುಭವ ಹೊಂದಿರುವ ಸಮಂತಾ, ಹೆಣ್ಣು ಮಕ್ಕಳು ಯಾವ ರೀತಿ ಜೀವನದಲ್ಲಿ ಬೆಳೆಯಬೇಕೆಂಬ ಕೆಲವು ಸಲಹೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಅ.2ರಂದು ಸಮಂತಾ ಮತ್ತು ನಾಗಚೈತನ್ಯ ಇಬ್ಬರೂ ತಂತಮ್ಮ ಇನ್ಸ್ಟಾಗ್ರಾಂ ಖಾತೆಗಳಲ್ಲಿ ಒಂದೇ ರೀತಿಯ ಸಂದೇಶಗಳನ್ನು ಪೋಸ್ಟ್ ಮಾಡುವ ಮೂಲಕ ಡಿವೋರ್ಸ್ ಅನ್ನು ಅಧಿಕೃತವಾಗಿ ಘೋಷಣೆ ಮಾಡಿದರು. “ಸಾಕಷ್ಟು ಸಮಾಲೋಚನೆಯ ಬಳಿಕವು ನಾವಿಬ್ಬರೂ ಗಂಡ-ಹೆಂಡತಿಯ ಸಂಬಂಧ ಬಿಟ್ಟು ಬೇರೆ ಬೇರೆಯಾಗುವ ನಿರ್ಧಾರ ತೆಗೆದುಕೊಂಡಿದ್ದೇವೆ. ಒಂದು ದಶಕದ ಮಟ್ಟಿಗಿನ ಆಪ್ತಸ್ನೇಹವನ್ನು ನಾವು ಹೊಂದಿದ್ದೆವು. ಬಹುಶಃ ಅದೇ ನಮ್ಮಿಬ್ಬರ ಸಂಬಂಧದ ಸತ್ವವಾಗಿತ್ತು. ಇದರಿಂದಲೇ ಮುಂದೆಯೂ ನಮ್ಮಿಬ್ಬರ ನಡುವೆ ವಿಶೇಷ ನಂಟು ಮುಂದುವರಿಯುತ್ತದೆ ಎಂದು ನಂಬಿದ್ದೇವೆ” ಎಂದು ಸಮಂತಾ ಮತ್ತು ನಾಗಚೈತನ್ಯ ಬರೆದಿದ್ದಾರೆ. ಜೊತೆಗೆ, ತಮ್ಮ ಈ ಕಷ್ಟಕಾಲದಲ್ಲಿ ತಮ್ಮ ಅಭಿಮಾನಿಗಳು, ಹಿತೈಷಿಗಳು ಮತ್ತು ಮಾಧ್ಯಮದವರು ತಮಗೆ ಬೆಂಬಲ ನೀಡಬೇಕು. ತಾವು ಮೂವ್ ಆನ್ ಆಗಲು ಅಗತ್ಯವಾದ ಪ್ರೈವೆಸಿ ಕೊಡಬೇಕು ಎಂದೂ ಮನವಿ ಮಾಡಿದ್ದಾರೆ.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ವಿಘ್ನೇಶ್ ಶಿವನ್ ನಿರ್ದೇಶನದ ಮತ್ತು ವಿಘ್ನೇಶ್ ಶಿವನ್ ರೌಡಿ ಪಿಕ್ಚರ್ಸ್ ಸಹಯೋಗದೊಂದಿಗೆ ಸೆವೆನ್ ಸ್ಕ್ರೀನ್ ಸ್ಟುಡಿಯೋದಿಂದ ಬಂಡವಾಳ ಹೂಡುತ್ತಿರುವ ತಮಿಳು ಸಿನಿಮಾ ಕಾತು ವಾಕುಲಾ ರಂಡು ಕಾದಲ್ ನಲ್ಲಿ ನಯನತಾರಾ ಮತ್ತು ವಿಜಯ್ ಸೇತುಪತಿ ಜೊತೆ ಸಮಂತಾ ನಟಿಸುತ್ತಿದ್ದಾರೆ. ಇದರೊಂದಿಗೆ ಗುಣಶೇಖರ್ ನಿರ್ದೇಶನದ ಶಾಕುಂತಲಂ ಸಿನಿಮಾದಲ್ಲಿ ಶಾಕುಂತಲೆಯಾಗಿ ಸಮಂತಾ ಬಣ್ಣ ಹಚ್ಚಿದ್ದು, ಶಾಕುಂತಲಂ ಚಿತ್ರದ ಚಿತ್ರೀಕರಣವನ್ನು ಸಮಂತಾ ಸಂಪೂರ್ಣ ಮುಗಿಸಿದ್ದಾರೆ. (ಏಜೆನ್ಸೀಸ್)