21ರ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಬಾಲಕ: ಪೊಲೀಸ್​ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು

Minor Boy
Published on

ಮಲಪ್ಪುರಂ: ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ 15 ವರ್ಷದ ಬಾಲಕನನ್ನು ಕೇರಳದ ಕೊಂಡೊಟ್ಟಿ ಪೊಲೀಸರು ಮಂಗಳವಾರ ವಶಕ್ಕೆ ಪಡೆದುಕೊಂಡಿದ್ದಾರೆ. ಸೋಮವಾರ ಮಧ್ಯಾಹ್ನ ಘಟನೆ ನಡೆದಿದ್ದು, ಆರೋಪಿ ಬಾಲಕ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತೆಯ ವಯಸ್ಸು 21 ವರ್ಷ. ಆರೋಪಿ ಬಾಲಕ, ಸಂತ್ರಸ್ತೆಯ ನೆರೆ ಮನೆಯವನು. ಘಟನೆ ನಡೆದ ಏರಿಯಾದಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ನಡೆಸಿದ ತನಿಖೆಯ ಬಳಿಕ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದಕ್ಕೂ ಮುನ್ನ ಪೊಲೀಸರಿಗೆ ಹೇಳಿಕೆ ನೀಡಿದ್ದ ಸಂತ್ರಸ್ತೆ, ತನ್ನ ಮೇಲೆ ಹಲ್ಲೆ ಮಾಡಿದ ವ್ಯಕ್ತಿಗೆ ಗಡ್ಡ ಮತ್ತು ಮೀಸೆ ಇರಲಿಲ್ಲ. ನೋಡಲು ದಪ್ಪಗೆ ಇದ್ದ ಎಂದು ತಿಳಿಸಿದ್ದಳು.

ಇನ್ನು ಘಟನೆಯ ವೇಳೆ ಆರೋಪಿ ಬಾಲಕನಿಗೆ ಗಾಯಗಳಾಗಿದ್ದು, ಬೀದಿ ನಾಯಿಗಳು ಅಟ್ಟಿಸಿಕೊಂಡು ಬಂದಿದ್ದರಿಂದ ಓಡುವಾಗ ಬಿದ್ದು ಗಾಯಗಳಾಯಿತು ಎಂದು ಪಾಲಕರಿಗೆ ಸುಳ್ಳು ಹೇಳಿರುವುದು ಪೊಲೀಸ್​​ ತನಿಖೆಯ ವೇಳೆ ಬಯಲಾಗಿದೆ.

ಘಟನೆ ಹಿನ್ನೆಲೆ ಏನು?

ಮಂಗಳವಾರ ಮಧ್ಯಾಹ್ನ ಸಂತ್ರಸ್ತೆ ಹೋಗುತ್ತಿರುವಾಗ ಕೊಂಡೊಟ್ಟಿಯ ಕೊಟ್ಟುಕ್ಕರದಲ್ಲಿ ಆಕೆಯ ಮೇಲೆ ಬಾಲಕ ಹಲ್ಲೆ ಮಾಡಿದ್ದಾನೆ. ಬಳಿಕ ಆಕೆಯನ್ನು ಪಕ್ಕದಲ್ಲೇ ಇದ್ದ ತೋಟಕ್ಕೆ ಎಳೆದೊಯ್ದಿದ್ದಾನೆ. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಸಂತ್ರಸ್ತೆಯ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ್ದಾನೆ. ಹೇಗೋ ತಪ್ಪಿಸಿಕೊಂಡ ಸಂತ್ರಸ್ತೆ, ಬಳಿಕ ಪಾಲಕರ ಬಳಿ ನಡೆದ ಘಟನೆಯನ್ನು ವಿವರಿಸಿದ್ದಾಳೆ.

ಇದಾದ ಬಳಿಕ ಸ್ಥಳೀಯರ ನೆರವಿನಿಂದ ಸಂತ್ರಸ್ತೆ ಕುಟುಂಬ ಪೊಲೀಸ್​ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಸದ್ಯ ಸಂತ್ರಸ್ತೆ ಕೋಝಿಕ್ಕೊಡ್​ ಮೆಡಿಕಲ್​ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಘಟನೆ ಸಮೀಪದಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ತನಿಖೆ ನಡೆಸಿದಾಗ ಕೃತ್ಯ ಎಸಗಿರುವುದು ಸಂತ್ರಸ್ತೆಯ ನೆರೆಮನೆ ಬಾಲಕ ಎಂಬುದು ತಿಳಿದುಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net