

ಬೆಂಗಳೂರು: ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಉಡುಗೊರೆ ಸಿಕ್ಕಿದ್ದಾಯ್ತು, ಇದೀಗ ರಾಜ್ಯ ಸರ್ಕಾರಿ ನೌಕರರಿಗೆ ಹಬ್ಬದ ಸಿಹಿ ಸುದ್ದಿ ಬಂದಿದೆ. ರಾಜ್ಯ ಸರ್ಕಾರದ ನೌಕರರಿಗೆ ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ(ಡಿಎ)ಯನ್ನು ಶೇ.3 ರಷ್ಟು ಏರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರಿ ನೌಕರರಿಗೆ ಮತ್ತು ಪಿಂಚಣಿದಾರರಿಗೆ 2018ರ ಪರಿಷ್ಕೃತ ವೇತನ ಮಾದರಿಯಲ್ಲಿ ಹಾಲಿ ಇದ್ದ ಮೂಲ ವೇತನದ ಶೇಕಡ 21.50ರಷ್ಟು ತುಟ್ಟಿ ಭತ್ಯೆಯನ್ನು ಶೇಕಡ 24.50 ರಷ್ಟಕ್ಕೆ ಏರಿಸಲಾಗಿದೆ. ಈ ಏರಿಕೆಯು 2021 ರ ಜುಲೈ 1 ರಿಂದ ಜಾರಿಗೆ ಬರಲಿದೆ ಎಂದು ಹಣಕಾಸು ಇಲಾಖೆಯ ಡೆಪ್ಯುಟಿ ಸೆಕ್ರೆಟರಿ ಉಮಾ ಕೆ. ಆದೇಶಿಸಿದ್ದಾರೆ.
ಈ ಪರಿಷ್ಕೃತ ಭತ್ಯೆಯು ಎಲ್ಲಾ ಪೂರ್ಣಕಾಲೀನ ಸರ್ಕಾರಿ ನೌಕರರಿಗೆ, ಜಿಲ್ಲಾ ಪಂಚಾಯತ್ ನೌಕರರಿಗೆ, ರೆಗ್ಯುಲರ್ ಪೇ ಸ್ಕೇಲ್ನಲ್ಲಿರುವ ಚಾರ್ಜಡ್ ನೌಕರರಿಗೆ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ಮತ್ತು ವಿಶ್ವವಿದ್ಯಾಲಯಗಳ ಪೂರ್ಣಕಾಲೀನ ನೌಕರರಿಗೆ ಅನ್ವಯಿಸುತ್ತದೆ. ಇವರೊಂದಿಗೆ, ರಾಜ್ಯ ಸರ್ಕಾರದ ಕನ್ಸಾಲಿಡೇಟೆಡ್ ಫಂಡ್ನಿಂದ ಪಿಂಚಣಿ ಅಥವಾ ಕೌಟುಂಬಿಕ ಪಿಂಚಣಿ ಪಾವತಿಸಲಾಗುತ್ತಿರುವ ನಿವೃತ್ತ ನೌಕರರು ಅಥವಾ ಕುಟುಂಬದವರಿಗೆ ಕೂಡ ಮೂಲ ಪಿಂಚಣಿಯ ಶೇ. 24.50 ರಷ್ಟು ತುಟ್ಟಿ ಭತ್ಯೆ ಜಾರಿಗೆ ಬರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.