ಅಪ್ಪು ಅಂತ್ಯಕ್ರಿಯೆ ಇಂದಲ್ಲ ನಾಳೆ: ದಿಢೀರ ಬದಲಾವಣೆ ಕುರಿತು ಸಿಎಂ ಬೊಮ್ಮಾಯಿ ನೀಡಿದ ಸ್ಪಷ್ಟನೆ ಇದು

Puneeth Funerals
Published on

ಬೆಂಗಳೂರು: ಪುನೀತ್ ರಾಜ್​ಕುಮಾರ್ ಅವರ ಪುತ್ರಿ ಆಗಮಿಸಿದ ನಂತರ ಕಂಠೀರವ ಸ್ಟುಡಿಯೋದಲ್ಲಿ ಇಂದು ಸಂಜೆ ಅಂತ್ಯಕ್ರಿಯೆ ನಡೆಸಲು ಸರ್ಕಾರ ಸಿದ್ಧತೆ ಮಾಡಿತ್ತು. ಆದರೆ, ಬದಲಾದ ನಿಲುವಿನಲ್ಲಿ ನಾಳೆ ಅಂತ್ಯಕ್ರಿಯೆ ನೆಡೆಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಕುಟುಂಬದ ಜತೆ ಚರ್ಚೆ ಮಾಡಿದ ಬಳಿಕ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಪುನೀತ್​ ಪುತ್ರಿ ಬರುವುದು ಇಂದು ಸಂಜೆ ಆಗುವುದರಿಂದ ರಾತ್ರಿ ಅಂತ್ಯಕ್ರಿಯೆ ಮಾಡುವುದು ಕಷ್ಟ ಎಂಬ ಕಾರಣದಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಅಲ್ಲದೆ, ಅಂತ್ಯಕ್ರಿಯೆ ನಡೆಯುವ ಜಾಗ ತುಂಬಾ ಇಕ್ಕಟ್ಟಾಗಿರುವುದರಿಂದ ಇಂದು ಎಲ್ಲವನ್ನು ನಿಭಾಯಿಸುವುದು ಕಷ್ಟ ಎಂಬ ಕಾರಣಕ್ಕೆ ನಾಳೆ ಅಂತ್ಯಕ್ರಿಯೆ ನಡೆಸಲು ಸರ್ಕಾರ ಮತ್ತು ಕುಟುಂಬ ನಿರ್ಧರಿಸಿದೆ.

ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ವ್ಯವಸ್ಥೆ ಮಾಡಿರುವ ನಗರದ ಕಂಠೀರವ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿಯವರು, ಪುನೀತ್ ರಾಜ್ ಕುಮಾರ್ ಅವರ ಅಂತ್ಯ ಸಂಸ್ಕಾರ ಇಂದು ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಅವರ ಮಗಳು ಬರುವುದು ಸಂಜೆ ಆಗುತ್ತದೆ. ರಾತ್ರಿ ಅಂತ್ಯಕ್ರಿಯೆ ನಡೆಸುವುದು ತುಂಬಾ ಕಷ್ಟ. ಅಲ್ಲದೆ, ಅಭಿಮಾನಿಗಳು ಇನ್ನು ಸಾಕಷ್ಟು ಸಂಖ್ಯೆಯಲ್ಲಿ ಅಂತಿಮ ದರ್ಶನ ಪಡೆಯಬೇಕಿದೆ. ಹೀಗಾಗಿ ಕುಟುಂಬದ ಜತೆ ಚರ್ಚಿಸಿ ನಾಳೆ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು. ಕಂಠೀರವ ಸ್ಟುಡಿಯೋದಲ್ಲಿ ಅವರ ಕುಟುಂಬದವರು ಮತ್ತು ಗಣ್ಯರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಇದನ್ನು ಸುಗಮವಾಗಿ ನಡೆಸಲು ಪೊಲೀಸ್ ಇಲಾಖೆ ಹಾಗೂ ಬಿಬಿಎಂಪಿಯವರು ಕ್ರಮ ವಹಿಸುತ್ತಿದ್ದಾರೆ ಎಂದು ಸಿಎಂ ಬೊಮ್ಮಾಯಿ ಮಾಹಿತಿ ನೀಡಿದರು.

ಇದೇ ವೇಳೆ ಅಭಿಮಾನಿಗಳ ಬಳಿ ಮನವಿ ಮಾಡಿದ ಸಿಎಂ ಬೊಮ್ಮಾಯಿ ಪುನೀತ್ ರಾಜ್‌ಕುಮಾರ್ ಜನಪ್ರಿಯ ನಟ. ಅವರ ಅಗಲಿಕೆ ನಮಗೆಲ್ಲರಿಗೂ ದುಃಖ ತಂದಿದೆ. ಅವರನ್ನು ಗೌರವದಿಂದ ಶಾಂತಿಯುತವಾಗಿ ನಾವು ಬೀಳ್ಕೊಡಬೇಕು. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದರು.

ಈ ಸಮಯ- ಈ ಸಂದರ್ಭದಲ್ಲಿ ನಾವು ಸಂಯಮ, ಜವಾಬ್ದಾರಿಯಿಂದ ವರ್ತಿಸಬೇಕಾಗಿದೆ. ಜನರು ಈವರೆಗೆ ಅತ್ಯುತ್ತಮವಾಗಿ ಸಹಕರಿಸಿದ್ದಾರೆ. ನಮ್ಮ ಜವಾಬ್ದಾರಿಯುತ ನಡವಳಿಕೆ ಡಾ. ರಾಜ್ ಕುಮಾರ್ ಹಾಗೂ ಪುನೀತ್ ಅವರಿಗೆ ಗೌರವ ಸಲ್ಲಿಸಿದಂತೆ. ಶಾಂತಿ, ಸ್ನೇಹದಿಂದ ಇರುವುದು ಕನ್ನಡಿಗರ ಸಂಸ್ಕೃತಿ. ಇದನ್ನು ನಾವು ಇಂದು ಮೆರೆಯಬೇಕಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net