

ಬೆಂಗಳೂರು: ಇತ್ತೀಚೆಗಷ್ಟೇ ಮುಗಿದ ಬಿಗ್ಬಾಸ್ ಸೀಸನ್ 8ರಲ್ಲಿ ಭಾರೀ ಸದ್ದು ಮಾಡಿದ ಎರಡು ಜೋಡಿ ಅಂದ್ರೆ ಒಂದು ಅರವಿಯಾ (ಅರವಿಂದ್ ಮತ್ತು ದಿವ್ಯಾ ಉರುಡುಗ) ಇನ್ನೊಂದು ಬಿಗ್ಬಾಸ್ ವಿನ್ನರ್ ಮಂಜು ಪಾವಗಡ-ದಿವ್ಯಾ ಸುರೇಶ್ ಜೋಡಿ. ಬಿಬಿಕೆ 8ರ ಆರಂಭದಿಂದಲೂ ಲ್ಯಾಗ್ ಮಂಜು ಮತ್ತು ದಿವ್ಯಾ ಸುರೇಶ್ಮ ತುಂಬಾ ಕ್ಲೋಸ್ ಆದರು. ಎಷ್ಟರ ಮಟ್ಟಿಗೆ ಅಂದ್ರೆ ಇಬ್ಬರ ನಡುವೆ ಏನೋ ನಡೆಯುತ್ತಿದೆ ಎಂದು ಬಿಗ್ ಮನೆಯಲ್ಲಿ ಮತ್ತು ಹೊರಗಡೆ ವೀಕ್ಷಕರ ನಡುವೆಯೂ ಭಾರಿ ಚರ್ಚೆಯಾಯಿತು.
ಒಬ್ಬರ ಬಗ್ಗೆ ಇನ್ನೊಬ್ಬರು ತುಂಬಾ ಒಳ್ಳೆಯ ಮಾತುಗಳನ್ನಾಡುವುದು ಸೇರಿ ಶೋ ಆರಂಭದಿಂದಲೂ ಕೊನೆಯವರೆಗೂ ಇಬ್ಬರು ಹೆಚ್ಚು ಸಮಯ ಒಟ್ಟಿಗೆ ಕಳೆದಿದ್ದಾರೆ. ಕರೊನಾ ಲಾಕ್ಡೌನ್ನಿಂದ ಬಿಗ್ಬಾಸ್ 75 ದಿನಗಳಿಗೆ ಮೊಟಕುಗೊಂಡು ಮತ್ತೆ ಎರಡನೇ ಇನ್ನಿಂಗ್ಸ್ ಆರಂಭಿಸಿದಾಗ ಮಂಜು, ದಿವ್ಯಾರಿಂದ ಸ್ವಲ್ಪ ಅಂತರ ಕಾಯ್ದುಕೊಂಡರು. ಈ ವೇಳೆ ದಿವ್ಯಾ ತುಂಬಾ ಭಾವುಕರಾಗಿದ್ದು ಉಂಟು. ನಂತರ ಇಬ್ಬರು ಮತ್ತೆ ಕ್ಲೋಸ್ ಆಗಿದ್ದು ಉಂಟು ಕೊನೆಯಲ್ಲಿ ದಿವ್ಯಾ ಸುರೇಶ್ ಲ್ಯಾಗ್ ಮಂಜುಗಾಗಿ ಕ್ಯಾಂಡಲ್ ಲೈಟ್ ಡಿನ್ನರ್ ಆಯೋಜಿಸಿದ್ದು ಇಬ್ಬರ ನಡುವಿನ ಸಂಬಂಧಕ್ಕೆ ಮತ್ತಷ್ಟು ಪುಷ್ಟಿ ನೀಡುವಂತಿತ್ತು.
ಇನ್ನು ಬಿಬಿಕೆಯಿಂದ ದಿವ್ಯಾ ಸುರೇಶ್ ಎಲಿಮಿನೇಟ್ ಆಗಿ ಹೊರಬಂದಾಗಲೂ ಮಂಜು ಪರವೇ ಹೆಚ್ಚು ಮಾತನಾಡಿದರು. ಮಂಜುನೇ ಗೆಲ್ಲಬೇಕೆಂದು ಬಯಸಿದರು. ಅವರಿಗೆ ಮತ ಚಲಾಯಿಸುವಂತೆ ಅಭಿಮಾನಿಗಳಲ್ಲಿ ಕೇಳಿಕೊಂಡರು. ಕೊನೆಗೂ ಬಿಗ್ಬಾಸ್ನಲ್ಲಿ ಮಂಜು ವಿನ್ನರ್ ಎಂದು ಘೋಷಿಸಿದಾಗ ಮಂಜುಗಿಂತ ಹೆಚ್ಚು ಖುಷಿಯಾಗಿದ್ದೇ ದಿವ್ಯಾ. ಸಿಕ್ಕಾಪಟ್ಟೆ ಖುಷಿಯಾಗಿ ವೇದಿಕೆ ಮೇಲೆ ದಿವ್ಯಾ ಕುಣಿದು ಕುಪ್ಪಳಿಸಿದರು. ಇದನ್ನು ನೋಡಿದ ವೀಕ್ಷಕರು ದಿವ್ಯಾ ಮತ್ತು ಮಂಜು ನಡುವೆ ಲವ್ ಇದೆ ಎಂದಿದ್ದರು.
ಬಿಬಿಕೆ 8ನೇ ಆವೃತ್ತಿ ಮುಗಿದ ಬಳಿಕವೂ ದಿವ್ಯಾ ಮತ್ತು ಮಂಜು ಅನೇಕ ಸನ್ನಿವೇಶಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಜನರ ಅನುಮಾನಕ್ಕೆ ಮತ್ತಷ್ಟು ಪುಷ್ಟಿ ನೀಡುವಂತಿದೆ. ಅಲ್ಲದೆ, ಪಾರ್ಕ್ ಒಂದರಲ್ಲಿ ಇಬ್ಬರು ಒಟ್ಟಿಗೆ ಮ್ಯೂಸಿಕ್ ಒಂದಕ್ಕೆ ರೊಮ್ಯಾಂಟಿಕ್ ಆಗಿ ನಟಿಸಿದ ವಿಡಿಯೋ ಕೂಡ ವೈರಲ್ ಆಗಿತ್ತು. ಈ ಎಲ್ಲ ಕಾರಣಗಳಿಂದ ಇಬ್ಬರ ನಡುವೆ ಸಮ್ಥಿಂಗ್ ಏನೋ ಇದೆ ಎಂದು ಭಾರಿ ಚರ್ಚೆಯಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಂತೂ ಇಬ್ಬರ ಫೋಟೋ ವೈರಲ್ ಆಗಿದೆ. ಅಲ್ಲದೆ, ಮಂಜು-ದಿವ್ಯಾ ಹೆಸರಿನಲ್ಲಿ ಫ್ಯಾನ್ಸ್ ಪೇಜ್ ಸಹ ಕ್ರಿಯೆಟ್ ಆಗಿದ್ದು, ಬಿಗ್ಬಾಸ್ ಜೋಡಿಯ ಖ್ಯಾತಿಗೆ ಕನ್ನಡಿ ಹಿಡಿದಂತಾಗಿದೆ.
ಇನ್ನು ತಾಜಾ ಬೆಳವಣಿಗೆಯೇನೆಂದರೆ, ಇತ್ತೀಚೆಗಷ್ಟೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಗಣೇಶೋತತ್ಸವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಪ್ರದಾಯುತವಾಗಿ ಆಚರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಿಗ್ಬಾಸ್ ಸ್ಪರ್ಧಿಗಳು ಕೂಡ ಭಾಗವಹಿಸಿದ್ದಾರೆ. ಅಲ್ಲದೆ, ಸ್ಪರ್ಧಿಗಳ ಕುಟುಂಬದ ಸದಸ್ಯರು ಕೂಡ ಪಾಲ್ಗೊಂಡಿದ್ದರು. ಏನಪ್ಪ ವಿಚಾರ ಅಂದ್ರೆ ದಿವ್ಯಾ ಅವರ ತಾಯಿ ಮತ್ತು ಸಹೋದರ ಜತೆಯಲ್ಲಿ ನಿಂತು ಮಂಜು ಪಾವಗಡ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋವನ್ನು ದಿವ್ಯಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಫೋಟೋ ಬಗ್ಗೆ ಬರೆದುಕೊಂಡಿರುವ ದಿವ್ಯಾ ಈ ಫ್ರೇಮ್ನಲ್ಲಿರುವ ಮೂರು ಜನ ನನ್ನ ಜೀವನದ ನಿಜವಾದ ಶಿಕ್ಷಕರು ಎಂದಿದ್ದಾರೆ. ನೀವು ಮೂವರು ನನಗೆ ತುಂಬಾ ಸ್ಫೂರ್ತಿ ನೀಡಿದ್ದೀರಿ, ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದ್ದೀರಿ ಎಂದು ಶಿಕ್ಷಕರ ದಿನದಂದು ಫೋಟೋಮ ಪೋಸ್ಟ್ ಮಾಡಿ ವಿಶ್ ಮಾಡಿದ್ದಾರೆ.
ಇದೀಗ ಆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮದುವೆ ವಿಚಾರ ಪ್ರಸ್ತಾಪಿಸಿದ್ದಾರೆ. ಇಬ್ಬರ ಬಾಂದವ್ಯ ಚೆನ್ನಾಗಿದೆ. ಇದು ಹೀಗೆ ಕೊನೆಯವರೆಗೂ ಇರಲಿ ಎಂದಿದ್ದಾರೆ. ಇನ್ನು ಕೆಲವರು ಇಬ್ಬರ ನಡುವೆ ನಿಜವಾದ ಪ್ರೀತಿ ಇದೆ. ಈ ಪ್ರೀತಿ ಕೊನೆಯವರೆಗೂ ಉಳಿಯಲಿ ಎನ್ನುವ ಮೂಲಕ ಮದುವೆ ಬಗ್ಗೆ ಪರೋಕ್ಷವಾಗಿ ಹೇಳಿದ್ದಾರೆ.