

ನವದೆಹಲಿ: ಟೋಕಿಯೋ ಒಲಿಂಪಿಕ್ಸ್ನಲ್ಲಿ ಜಾವಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದು ಒಲಿಂಪಿಕ್ಸ್ ಇತಿಹಾಸದಲ್ಲೇ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತಕ್ಕೆ ಮೊಟ್ಟಮೊದಲ ಬಾರಿಗೆ ಸ್ವರ್ಣ ಪದಕವನ್ನು ತಂದು ಕೊಡುವ ಮೂಲಕ ಐತಿಹಾಸಿಕ ಸಾಧನೆ ಮಾಡಿ ಚಿನ್ನದ ಹುಡುಗನೆಂದೇ ಖ್ಯಾತಿಯಾಗಿರುವ ಹರಿಯಾಣ ಮೂಲದ ನೀರಜ್ ಚೋಪ್ರಾ ನಮ್ಮೆಲ್ಲರ ಹೆಮ್ಮೆ. ಇತ್ತೀಚೆಗೆ ನಡೆದ ಮಾಧ್ಯಮ ಸಂದರ್ಶನವೊಂದರಲ್ಲಿ ಕಲಾ ಇತಿಹಾಸಕಾರ ರಾಜೀವ್ ಸೇಥಿ ಅವರು ಸೆಕ್ಸ್ ಲೈಫ್ ಬಗ್ಗೆ ಕೇಳಿದ ಪ್ರಶ್ನೆಗೆ ನೀರಜ್ ಪ್ರತಿಕ್ರಿಯಿಸಿದ ರೀತಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಸಂದರ್ಶನದ ಒಂದು ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದರಲ್ಲಿ ನೀವೊಬ್ಬ ಸುಂದರ ಯುವಕ, ಅಥ್ಲೆಟಿಕ್ ತರಬೇತಿ ಮತ್ತು ಸೆಕ್ಸ್ ಲೈಫ್ ಅನ್ನು ನೀವು ಹೇಗೆ ಬ್ಯಾಲೆನ್ಸ್ ಮಾಡುತ್ತೀರಿ ಎಂದು ರಾಜೀವ್ ಸೇಥಿ ಅವರು ಹಿಂದಿ ಭಾಷೆಯಲ್ಲಿ ನೀರಜ್ರನ್ನು ಪ್ರಶ್ನೆ ಮಾಡುತ್ತಾರೆ. ಅಲ್ಲದೆ, ನಾನು ಕೇಳಿದ ಪ್ರಶ್ನೆ ಅಸಂಬದ್ಧ ಎಂದು ಗೊತ್ತಿದೆ. ಆದರೆ, ಕ್ರೀಡಾಪಟುವಿಗೆ ಅದರ ಹಿಂದಿನ ಗಂಭೀರತೆ ಏನೆಂದು ತಿಳಿದಿದೆ ಎಂದು ತಮ್ಮ ಪ್ರಶ್ನೆಗೆ ಸಮಜಾಯಿಷಿಯನ್ನು ನೀಡಿದರು.
ರಾಜೀವ್ ಸೇಥಿ ಕೇಳಿದ ಪ್ರಶ್ನೆಗೆ ನೀರಜ್ ಕೊಂಚ ಮುಜಗರಕ್ಕೀಡಾದಂತೆ ವಿಡಿಯೋದಲ್ಲಿ ಕಾಣುತ್ತದೆ. ಅಲ್ಲದೆ, ಆ ಪ್ರಶ್ನೆಗೆ ಉತ್ತರಿಸಲು ನೀರಜ್ ನಿರಾಕರಿಸುತ್ತಾರೆ. ಕ್ಷಮಿಸಿ ಸರ್, ನಾನು ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ರಾಜೀವ್ ಸೇಥಿ ಮತ್ತೊಮ್ಮೆ ಅದೇ ಪ್ರಶ್ನೆಯನ್ನು ಒತ್ತಿ ಹೇಳಿ ಉತ್ತರ ಪಡೆಯಲು ಯತ್ನಿಸುತ್ತಾರೆ. ಆದರೆ, ಮತ್ತೊಮ್ಮೆ ನೀರಜ್ ನಿರಾಕರಿಸುತ್ತಾರೆ. ಬಳಿಕ ರಾಜೀವ್ ಸೇಥಿ ತಮ್ಮ ಅಸಂಬದ್ಧ ಪ್ರಶ್ನೆಗೆ ಕ್ಷಮೆಯಾಚಿಸುತ್ತಾರೆ.
ಕಳೆದ ಶುಕ್ರವಾರ ಶೇರ್ ಆಗಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಆಗಿದೆ. ಟ್ವಿಟರ್ನಲ್ಲಿ ಈಗಾಗಲೇ 4 ಲಕ್ಷಕ್ಕೂ ಅಧಿಕ ಮಂದಿ ವಿಡಿಯೋವನ್ನು ವೀಕ್ಷಣೆ ಮಾಡಿದ್ದು, ನೀರಜ್ ಚೋಪ್ರ, ಮುಜುಗರದ ಸನ್ನಿವೇಶವನ್ನು ಹಾಗೂ ಅಸಂಬದ್ಧ ಪ್ರಶ್ನೆಯನ್ನು ನಿರ್ವಹಿಸಿದ ರೀತಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಎಲ್ಲಾ ಪ್ರಶ್ನೆಗಳನ್ನು ಸುಲಲಿತವಾಗಿ ನಿಭಾಯಿಸಿದ್ದಕ್ಕಾಗಿ ನೀರಜ್ರನ್ನು ಸಂಸತ್ ಸದಸ್ಯೆ ಪ್ರಿಯಾಂಕಾ ಚತುರ್ವೇದಿ ಪ್ರಶಂಸಿಸಿದರು. ಅಲ್ಲದೆ, ಸಾಕಷ್ಟು ಮಂದಿ ನೀರಜ್ರನ್ನು ಕೊಂಡಾಡಿದ್ದಾರೆ.
ಇನ್ನು ಪ್ರಶ್ನೆ ಕೇಳಿದ ರಾಜೀವ್ ಸೇಥಿ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕಲಾ ಇತಿಹಾಸಕಾರರು ತಮ್ಮ ವಯಸ್ಸಿಗೆ ತಕ್ಕಂತೆ ಹಾಗೂ ತಮ್ಮ ವೃತ್ತಿಯ ಘನತೆಗೆ ತಕ್ಕಂತೆ ಪ್ರಶ್ನೆ ಮಾಡಬೇಕಿತ್ತು. ಅವರು ಮಾಡಿದ್ದು ವೃತ್ತಿಪರವಲ್ಲದ ಮತ್ತು ಅಪರಾಧ ಎಂದು ನೆಟ್ಟಿಗರು ಜರಿದಿದ್ದಾರೆ. (ಏಜೆನ್ಸೀಸ್)